ಕೇಂದ್ರ ಸರಕಾರದ ವಿರುದ್ದ ಸಂಘಟಿತ ಹೋರಾಟ : ವಿಪಕ್ಷಗಳಿಗೆ ಮಮತಾ ಬ್ಯಾನರ್ಜಿ ಕರೆ
.jpg)
ಕೋಲ್ಕತಾ, ನ.5: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದ್ವೇಷ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿಪಕ್ಷಗಳು ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದು ಹೇಳಿದ್ದಾರೆ.
ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆಯ ಅನುಷ್ಠಾನದ ವಿಷಯದಲ್ಲಿ ಅಸಮಾಧಾನದಿಂದ ನಿವೃತ್ತ ಯೋಧ ಆತ್ಮಹತ್ಯೆ ಮಾಡಿಕೊಂಡ ಘಟನೆ ಮತ್ತು ಎಂಟು ಸಿಮಿ ಕಾರ್ಯಕರ್ತರ ಎನ್‌ಕೌಂಟರ್ ಪ್ರಕರಣ ರಾಜಕೀಯ ಕ್ಷೋಭೆಯ ಸ್ಥಿತಿಗೆ ಕಾರಣವಾಗಿದೆ ಎಂದರು.
ಅಭಿವೃದ್ಧಿ ಕಾರ್ಯದ ವಿಷಯದಲ್ಲೂ ಕೇಂದ್ರ ಸರಕಾರ ದ್ವೇಷ ರಾಜಕಾರಣ ನಡೆಸುತ್ತಿದೆ. ರಾಜ್ಯವೊಂದರ ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸುವ ಬದಲು ಮುಖ್ಯ ಕಾರ್ಯದರ್ಶಿಯೊಡನೆ ಸಮಾಲೋಚಿಸುವ ಅಗತ್ಯವಿತ್ತೇ. ಇದು ಅಭೂತಪೂರ್ವ ಘಟನೆ ಎಂದು ಮಮತಾ ನುಡಿದರು. ಉದ್ಯೋಗ ಖಾತರಿ ಯೋಜನೆಯೊಂದರ ಅನುಷ್ಠಾನದ ಬಗ್ಗೆ ಈಚೆಗೆ ಮೋದಿ ಪಶ್ಚಿಮ ಬಂಗಾಲ ಸರಕಾರದ ಉನ್ನತ ಅಧಿಕಾರಿಯೊಂದಿಗೆ ಸಮಾಲೋಚಿಸಿದ್ದರು.
ನಾನು ಏಕಾಂಗಿಯಾಗಿ ಈ ಹೋರಾಟ ನಡೆಸುತ್ತಿದ್ದೇನೆ. ಎಲ್ಲರೂ ಒಗ್ಗೂಡಿ, ರಾಜಕೀಯ ರಂಗವೊಂದನ್ನು ಸ್ಥಾಪಿಸಬೇಕೆಂದು ನನ್ನ ಮಿತ್ರಪಕ್ಷಗಳಲ್ಲಿ ವಿನಂತಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಯಾರಾದರೂ ಮುಂದೆ ಬಂದರೆ ಅಥವಾ ನನ್ನನ್ನು ಕರೆದರೆ ನಾನೂ ಸೇರಿಕೊಳ್ಳುತ್ತೇನೆ ಎಂದರು.
ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧನ ಕುಟುಂಬ ವರ್ಗದವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಅವಕಾಶ ನಿರಾಕರಿಸಿದ್ದು ಖಂಡನೀಯ ಎಂದ ಮಮತಾ, ಕೇಜ್ರೀವಾಲ್ ದಿಲ್ಲಿಯ ಮುಖ್ಯಮಂತ್ರಿ.
ಅವರ ರಾಜ್ಯದಲ್ಲೇ ಅವರನ್ನು ಬಂಧಿಸಿರುವುದು ಸರಿಯೇ. ಮೇಲಿನವರಿಂದ ಆಜ್ಞೆ ಬಂದಿದೆ ಎಂದು ಪೊಲೀಸರು ಹೇಳುತ್ತಾರೆ. ಯಾರು , ಯಾವ ಆಜ್ಞೆ ನೀಡಿದ್ದಾರೆ.. ? ಎಂದು ಪ್ರಶ್ನಿಸಿದ ಅವರು, ಎಂಟು ಸಿಮಿ ಕಾರ್ಯಕರ್ತರ ಎನ್‌ಕೌಂಟರ್ ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.







