ಪ್ರಪ್ರಥಮ ಇಂಡೋ-ಅಮೆರಿಕನ್ ಸೆನೆಟರ್ : ದಾಖಲೆಯ ಸನಿಹದಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್
.jpg)
ಲಾಸ್‌ಏಂಜೆಲಿಸ್, ನ.5: ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅಮೆರಿಕಾ ಸಂಸತ್ತಿನ ಪ್ರಪ್ರಥಮ ಇಂಡೋ-ಅಮೆರಿಕನ್ ಸೆನೆಟರ್ ಆಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.
ಅಮೆರಿಕಾದ ಅಧ್ಯಕ್ಷ ಒಬಾಮಾ ಮತ್ತು ಉಪಾಧ್ಯಕ್ಷ ಜೋ ಬಿಡೆನ್ ಅವರ ಬೆಂಬಲ ಪಡೆದಿರುವ 51ರ ಹರೆಯದ ಕಮಲಾ ಹ್ಯಾರಿಸ್, ತಮ್ಮ ಪ್ರತಿಸ್ಪರ್ಧಿ ಲೊರೆಟ್ಟಾ ಸ್ಯಾಂಚೆಸ್ ಅವರಿಗಿಂತ ಭಾರೀ ಮುನ್ನಡೆ ಸಾಧಿಸಿದ್ದಾರೆ. ಮೂರನೇ ಒಂದರಷ್ಟು ರಿಪಬ್ಲಿಕನ್ ಪರ ಮತದಾರರು ತಾವು ಯಾರಿಗೂ ಮತ ಹಾಕುವುದಿಲ್ಲ ಎಂದು ತಿಳಿಸಿರುವುದು ರಿಪಬ್ಲಿಕನ್ ಪಕ್ಷದ ಬೆಂಬಲಿಗರನ್ನು ಒಟ್ಟುಗೂಡಿಸಿ ಅವರ ಬೆಂಬಲದಿಂದ ಆಯ್ಕೆಯಾಗುವ ಲೊರೆಟ್ಟಾ ಆಶಯಕ್ಕೆ ಭಾರೀ ಹಿನ್ನಡೆಯಾಗಿದೆ ಎನ್ನಲಾಗಿದೆ. ಸೈದ್ಧಾಂತಿಕವಾಗಿ ಈ ಇಬ್ಬರು ಅಭ್ಯರ್ಥಿಗಳಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ರಿಪಬ್ಲಿಕನ್ ಬೆಂಬಲಿಗರ ಅಭಿಮತವಾಗಿದೆ.
ಸಂಭಾವ್ಯ ಮತದಾರರಲ್ಲಿ ಶೇ.47ರಷ್ಟು ಕಮಲಾರನ್ನು ಬೆಂಬಲಿಸಿದರೆ, ಲೊರೆಟ್ಟಾ ಶೇ. 23ರಷ್ವು ಬೆಂಬಲ ಪಡೆದಿದ್ದಾರೆ. ಶೇ.17ರಷ್ಟು ಮಂದಿ ಯಾರನ್ನು ಬೆಂಬಲಿಸಬೇಕು ಎಂದು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಮತ ಚಲಾಯಿಸಿದವರಲ್ಲಿ ಕಮಲಾ ಹ್ಯಾರಿಸ್ ಪರ ಶೇ.55, ಲೊರೆಟ್ಟಾ ಪರ ಶೇ.26 ಮಂದಿ ಒಲವು ತೋರಿದ್ದಾರೆ. ಶೇ.14ರಷ್ಟು ಮಂದಿ ತಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದಿದ್ದಾರೆ. ಕಳೆದ ವರ್ಷದ ಜನವರಿಯಲ್ಲಿ ಸೆನೆಟರ್ ಅಭ್ಯರ್ಥಿಯಾಗಿ ತನ್ನ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಎಲ್ಲಾ ವಯೋಮಾನದವರ ಬೆಂಬಲ ಪಡೆದಿರುವ ಕಮಲಾ ಹ್ಯಾರಿಸ್, ಎಲ್ಲಾ ಹಂತದಲ್ಲೂ ತನ್ನ ಪ್ರತಿಸ್ಪರ್ಧಿಯ ವಿರುದ್ಧ ಮುನ್ನಡೆ ಸಾಧಿಸುತ್ತಾ ಬಂದಿದ್ದಾರೆ. ಕಮಲಾರ ತಾಯಿ 1960ರಲ್ಲಿ ಚೆನ್ನೈಯಿಂದ ಅಮೆರಿಕಾಕ್ಕೆ ವಲಸೆ ಹೋಗಿ ಅಲ್ಲಿಯ ಪ್ರಜೆಯನ್ನು ಮದುವೆಯಾಗಿದ್ದರು.







