ಮಧ್ಯಪ್ರದೇಶ ಸಿಎಂ ರಾಜೀನಾಮೆಗೆ ಎಸ್‌ಡಿಪಿಐ ಒತ್ತಾಯ
ಭೋಪಾಲ್ ನಕಲಿ ಎನ್‌ಕೌಂಟರ್ ಪ್ರಕರಣ

ಚಿಕ್ಕಮಗಳೂರು, ನ.5: ಮಧ್ಯಪ್ರದೇಶದ ಭೋಪಾಲ್ ಜೈಲಿನಲ್ಲಿದ್ದ ಶಂಕಿತ ಸಿಮಿ ಸಂಘಟನೆಯ 8 ಮಂದಿ ವಿಚಾರಣಾಧೀನ ಕೈದಿಗಳ ನಕಲಿ ಎನ್‌ಕೌಂಟರ್ ಪ್ರಕರಣವು ಅನುಮಾನವನ್ನುಂಟು ಮಾಡಿದ್ದು, ಅನೇಕ ಪ್ರಶ್ನೆಗಳಿಗೆ ಎಡೆಮಾಡಿದ್ದು, ಭದ್ರತೆ ಒದಗಿಸಲು ಸಾಧ್ಯವಾಗದ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ನೀಡಬೇಕು. ಈ ಕುರಿತು ತನಿಖೆ ನಡೆಸಿ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸೈಯದ್ ಅಝ್ಮತ್ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ವೈಶಾಲಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ಸುಭದ್ರವಾದ ಜೈಲಿನಿಂದ ಕೈದಿಗಳು ಹೇಗೆ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಪ್ರಶ್ನಿಸಿರುವ ಅವರು, ಐ.ಎಸ್.ಒ ಪ್ರಮಾಣ ಪತ್ರ ಹೊಂದಿರುವಂತ ಜೈಲಿನಿಂದ ವಿಚಾರಣಾಧೀನ ಕೈದಿಗಳು 20 ನಿಮಿಷಗಳಲ್ಲಿ ತಪ್ಪಿಸಿಕೊಂಡು ಯಾವುದೇ ಸಿಬ್ಬಂದಿಯ ಕಣ್ಣಿಗೆ ಬೀಳದೆ ಹೊರ ನಡೆದಿದ್ದಾರೆ ಎಂದು ಜೈಲಿನಿಂದ ತಪ್ಪಿಸಿಕೊಂಡ ಕಥೆಯನ್ನು ಜನರ ದಿಕ್ಕು ತಪ್ಪಿಸಲು ಪೊಲೀಸರು ಹೆಣೆದಿದ್ದಾರೆ. ಪ್ರಕರಣದ ಸತ್ಯಾಂಶವು ಜನರಿಗೆ ತಿಳಿಯಬೇಕಾದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕೈದಿಗಳು ತಪ್ಪಿಸಿ ಕೊಂಡು ಹೋದ ಹಾಗೂ ಎನ್‌ಕೌಂಟರ್ ನಡೆದಿರುವ ಕಟ್ಟುಕಥೆಯಲ್ಲಿ ಸತ್ಯವಿಲ್ಲ. ಮಧ್ಯಪ್ರದೇಶದ ಗೃಹ ಮಂತ್ರಿ ಭೂಪೇಂದ್ರ ಸಿಂಗ್‌ರವರ ಹೇಳಿಕೆಗೂ ಭೋಪಾಲ್‌ನ ಐಜಿ ಹೇಳಿಕೆಗೂ ಹೋಲಿಕೆಗಳು ಕಂಡು ಬರುತ್ತಿಲ್ಲ. ಗೃಹ ಮಂತ್ರಿಯ ಪ್ರಕಾರ ಕೈದಿಗಳ ಬಳಿ ಆಯುಧಗಳು ಇರಲಿಲ್ಲ. ಆದರೆ ಐಜಿ ಹೇಳಿಕೆಯಲ್ಲಿ ಕೈದಿಗಳು ಗುಂಡು ಹಾರಿಸಿದ್ದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಎನ್‌ಕೌಂಟರ್ ಪ್ರಕರಣವು ಒಂದು ಪೂರ್ವನಿಯೋಜಿತ ಹಾಗೂ ಯೋಜನಾ ಬದ್ಧವಾದ ಘಟನೆಯಾಗಿದೆ. ಏಕೆಂದರೆ ಸಿಮಿ ಸಂಘಟನೆಯ ಎಲ್ಲ ವಿಚಾರಣಾಧೀನ ಕೈದಿಗಳು ಕೆಲವೇ ದಿನಗಳಲ್ಲಿ ಬಂಧನ ಮುಕ್ತವಾಗಲಿದ್ದರು. ಈ ನಕಲಿ ಎನ್‌ಕೌಂಟರ್‌ನನ್ನು ಅಸಲಿ ಎನ್‌ಕೌಂಟರ್ ಎಂದು ಬಿಂಬಿಸಲು ಒಬ್ಬ ಅಮಾಯಕ ಪೊಲೀಸ್ ಪೇದೆ ತನ್ನ ಪ್ರಾಣವನ್ನು ತೆರಬೇಕಾಯಿತು. ಕಾನೂನು ಸರ್ವೋಚ್ಚವಾದದ್ದು ಹಾಗೂ ಯಾವುದೇ ಅಪರಾಧ ಪ್ರಕರಣವನ್ನು ಸಾಬೀತುಪಡಿಸಿ ಶಿಕ್ಷೆ ನೀಡುವುದು ನ್ಯಾಯಾಲಯದ ಕೆಲಸವಾಗಿದೆ. ಆದರೆ ಅನಧಿಕೃತ ಮಾರ್ಗಗಳಿಂದ ಹಾಗೂ ಅನ್ಯಾಯವಾಗಿ ಯಾರೊಬ್ಬರ ಪ್ರಾಣ ತೆಗೆಯುವುದು ಕೊಲೆಗೆ ಸಮವಾಗಿದೆ ಎಂದಿದ್ದಾರೆ.







