ಮಾತೃಭಾಷೆ ಶಿಕ್ಷಣ ನೀಡಲು ಜ್ಞಾನ ಆಯೋಗದ ಶಿಫಾರಸು
‘ಕರ್ನಾಟಕ ಶಿಕ್ಷಣ ನೀತಿ’ ಕರಡು ವರದಿ ಸಲ್ಲಿಕೆ

ಬೆಂಗಳೂರು, ನ. 5: ‘ಒಂದರಿಂದ ನಾಲ್ಕನೆ ತರಗತಿಯವರೆಗೆ ಮಾತೃ ಭಾಷೆಯಲ್ಲೇ ಶಿಕ್ಷಣ, ಬಹುಭಾಷಾ ಕಲಿಕೆಗೆ ಅವಕಾಶ, 5ನೆ ತರಗತಿ ಬಳಿಕ ಬೋಧನಾ ಮಾಧ್ಯಮ ಆಯ್ಕೆ ವಿದ್ಯಾರ್ಥಿಗಳಿಗೆ ಬಿಡುವುದು, ಶಿಕ್ಷಕರಿಗೆ ಬಿ.ಎಡ್ ಕಡ್ಡಾಯ, ಬೋಧನಾ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ವಿದೇಶದಲ್ಲಿ ತರಬೇತಿ ನೀಡುವುದು’ ಸೇರಿದಂತೆ ಹಲವು ಮಹತ್ವದ ಶಿಫಾರಸುಗಳನ್ನು ಒಳಗೊಂಡ ‘ಕರ್ನಾಟಕ ಶಿಕ್ಷಣ ನೀತಿ’ ಕರಡು ವರದಿಯನ್ನು ಜ್ಞಾನ ಆಯೋಗ ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.
ಶನಿವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ನೇತೃತ್ವದ ಸಮಿತಿ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‌ರಿಗೆ ವರದಿಯನ್ನು ಸಲ್ಲಿಸಿತು.
ಬಳಿಕ ಮಾತನಾಡಿದ ಡಾ.ಕೆ.ಕಸ್ತೂರಿ ರಂಗನ್, ಪೋಷಕರಿಂದು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ತಮ್ಮ ಆದಾಯದ ಶೇ.20ರಿಂದ 30 ರಷ್ಟು ಹಣವನ್ನು ವೆಚ್ಚ ಮಾಡುತ್ತಿದ್ದು, ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಆಲೋಚನೆ ನಡೆಸಬೇಕಿದೆ. ಎಲ್ಲ ವರ್ಗಗಳ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಬೇಕೆಂದರು.
ಸಿಬಿಎಸ್‌ಇ ಪಠ್ಯ ಅಳವಡಿಕೆ, ಹೆಣ್ಣು ಮಕ್ಕಳಿಗೆ ಪದವಿಯವರೆಗೆ ಶಿಕ್ಷಣ ಕಡ್ಡಾಯ, ಎಲ್ಲ ಮಕ್ಕಳಿಗೂ ಪಿಯುಸಿವರೆಗೆ ಶಿಕ್ಷಣ ಕಡ್ಡಾಯ, ವಿಶ್ವ ವಿದ್ಯಾಲಯಗಳ ಆಡಳಿತದಲ್ಲಿ ಸ್ವಾಯತ್ತೆ ಸೇರಿದಂತೆ ಶೈಕ್ಷಣಿಕ ಉನ್ನತಿಯ ಬಗ್ಗೆ ಅಧ್ಯಯನ ನಡೆಸಿದ ಸಮಿತಿ ಈ ಸಂಬಂಧ ಹಲವು ಶಿಫಾರಸುಗಳನ್ನು ಮಾಡಿದೆ ಎಂದು ಹೇಳಿದರು.
ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಿಗೂ ರಾಜ್ಯ ಸರಕಾರ ಸೂಕ್ತ ಅನು ದಾನ ನೀಡಬೇಕು. ವಿವಿಗಳು ತಮ್ಮ ವ್ಯಾಪ್ತಿಯ ಒಳಗಿನ ವಿದ್ಯಾರ್ಥಿ ಗಳಿಗೆ ಶೇ.50ರಷ್ಟು ಸೀಟು ನೀಡಬೇಕು.
ಖಾಸಗಿ ಹಿಡಿತ ತಪ್ಪಿಸಲು ಕ್ರಮ: ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದು, ಪೂರ್ವ ಪ್ರಾಥಮಿಕ ಶಾಲೆಗಳನ್ನು ಸರಕಾರದಿಂದಲೇ ಆರಂಭಿಸಬೇಕೆಂಬುದು ಸೇರಿ ದಂತೆ ಶಿಕ್ಷಣ ಸಬಲೀಕರಣದ ದೃಷ್ಟಿಯಿಂದ ಜ್ಞಾನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.
ಪೂರ್ವ ಪ್ರಾಥಮಿಕ (ನರ್ಸರಿ) ಶಾಲೆಗಳು ಸಂಪೂರ್ಣವಾಗಿ ಖಾಸಗಿ ಹಿಡಿತದಲ್ಲಿದ್ದು ಅದನ್ನು ತಪ್ಪಿಸುವ ದೃಷ್ಟಿಯಿಂದ ಈಗಾಗಲೇ ಕೇಂದ್ರ ಸರಕಾರದೊಂದಿಗೆ ಚರ್ಚಿಸಲಾಗಿದೆ. ರಾಜ್ಯ ಸರಕಾರದಿಂದಲೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ ಎಂದವರು ತಿಳಿಸಿದರು.
ಶೈಕ್ಷಣಿಕ ಉನ್ನತಿಯಿಂದ ರಾಜ್ಯದ ಅಭಿವೃದ್ದಿ ಸಾಧ್ಯ. ಅದಕ್ಕಾಗಿ ಶಿಕ್ಷಣ ಸಬಲೀಕರಣ, ಶಿಕ್ಷಕರ ಬೋಧನಾ ಸಾಮರ್ಥ್ಯ ಹೆಚ್ಚಳ ಸೇರಿದಂತೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಜ್ಞಾನ ಆಯೋಗದ ಶ್ರಮವನ್ನು ಯಾವುದೇ ಕಾರಣಕ್ಕೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ತನ್ವೀರ್ ಸೇಠ್ ಅಭಯ ನೀಡಿದರು.
ಶಿಕ್ಷಣದ ಗುಣಮಟ್ಟ ಸುಧಾರಿಸಲು ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಸಚಿವರ ಉನ್ನತ ಮಟ್ಟದ ಸಲಹಾ ಸಮಿತಿ ರಚಿಸಬೇಕು. ಶಿಕ್ಷಣ ವ್ಯವಸ್ಥೆ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಬೇಕೆಂದು ಶಿಫಾರಸು ಮಾಡಿದೆ ಎಂದು ಕಸ್ತೂರಿ ರಂಗನ್ ತಿಳಿಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ, ಜ್ಞಾನ ಆಯೋಗದ ಉಪಾಧ್ಯಕ್ಷ ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು, ಮೈಸೂರು ವಿವಿ ಕುಲಪತಿ ರಂಗಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಆಯೋಗದ ಸದಸ್ಯರು ಹಾಜರಿದ್ದರು.
‘ಶೈಕ್ಷಣಿಕ ಉನ್ನತಿಗೆ ಸುದೀರ್ಘ ಅಧ್ಯಯನ ನಡೆಸಿ ಜ್ಞಾನ ಆಯೋಗ ಅಮೂಲ್ಯ ಸಲಹೆಗಳನ್ನು ನೀಡಿದ್ದು, ‘ಕರ್ನಾಟಕ ಶಿಕ್ಷಣ ನೀತಿ’ ಕರಡು ವರದಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ, ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಆಯೋಗದ ಶಿಫಾರಸ್ಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.
-ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ







