ನಗರಸಭೆ ಕಡತ, 28 ರಶೀದಿ ಪುಸ್ತಕಗಳು ನಾಪತ್ತೆ
ಸಾಮಾನ್ಯ ಸಭೆ

ಮಡಿಕೇರಿ, ನ.5 : ಹೊರ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಕಾರ್ಮಿಕರಿಗೆ ಸಂಬಂಧಿಸಿದ ಕಡತವೊಂದು ನಗರಸಭೆಯಿಂದ ನಾಪತ್ತೆಯಾಗಿರುವ ಪ್ರಕರಣ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಕಳೆದ ಎರಡು ವರ್ಷಗಳಿಂದ ನಗರಸಭೆಯಲ್ಲಿ ಆಡಿಟಿಂಗ್ ನಡೆಯದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ರಾಜ್ಯ ಮಟ್ಟದ ವಿಶೇಷ ಆಡಿಟ್ ತಂಡದಿಂದ ಆಡಿಟಿಂಗ್ ನಡೆಸಲು ಸಭೆ ನಿರ್ಧಾರ ಕೈಗೊಂಡಿತು.
ನಗರಸಭೆಯ ಸಾಮಾನ್ಯ ಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ನಡೆಯಿತು. ಕಡತ ನಾಪತ್ತೆಯಾಗಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕಡತ ನಾಪತ್ತೆಯಾಗಿರುವ ವಿಚಾರ ತಿಳಿದಿದ್ದರೂ ಇದಕ್ಕೆ ಸಂಬಂಧಿಸಿದ ಲೆಕ್ಕಾಧಿಕಾರಿ ಹನುಮಂತ ರಾಜು ಅವರು ವರ್ಗವಾಗಿ ಹೋಗಲು ಪೌರಾಯುಕ್ತರು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ಎಸ್‌ಡಿಪಿಐ ಸದಸ್ಯ ಅಮೀನ್ ಮೊಹಿಸಿನ್, ಲೆಕ್ಕಾಧಿಕಾರಿಯನ್ನು ವರ್ಗಾವಣೆ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷಗಳಿಂದ ನಗರಸಭೆಯಲ್ಲಿ ಆಡಿಟ್ ನಡೆದಿಲ್ಲ. ಪಿಎಫ್ ಹಣ ಮುಟ್ಟುಗೋಲಾಗಿದೆ, ಈ ಹಿಂದೆ ತೆರಿಗೆ ವಸೂಲಾತಿಯಲ್ಲಿ ಇಬ್ಬರು ಸಿಬ್ಬಂದಿಯಿಂದ ಅವ್ಯವಹಾರ ನಡೆದಿದೆ. ಇದೀಗ ಕಡತವೇ ನಾಪತ್ತೆಯಾಗಿದ್ದು, ಈ ಪ್ರಕರಣಗಳ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ಕಡತ ನಾಪತ್ತೆಯಾಗಿ ಎರಡು ತಿಂಗಳುಗಳೇ ಕಳೆದಿದ್ದರೂ ಪತ್ತೆ ಹಚ್ಚುವ ಕಾರ್ಯ ಅಥವಾ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ನಗರಸಭೆಯ ಪ್ರತೀ ಕಚೇರಿಯಲ್ಲೂ ಸಿಸಿ ಕ್ಯಾಮರಾಗಳಿದ್ದರೂ ನಾಪತ್ತೆ ಪ್ರಕರಣವನ್ನು ತನಿಖೆಗೆ ಒಳಪಡಿಸಿಲ್ಲವೆಂದು ಅಮೀನ್ ಮೊಹಿಸಿನ್ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಪಿ.ಡಿ.ಪೊನ್ನಪ್ಪ ಮಾತನಾಡಿ, ಕಡತ ನಾಪತ್ತೆಯಾಗಲು ಅಧಿಕಾರಿ ಹನುಮಂತ ರಾಜು ಅವರು ಕಾರಣಕರ್ತರಾಗಿದ್ದರೆ ಅವರ ವಿರುದ್ಧ ದೂರು ನೀಡುವಂತೆ ಸಲಹೆ ನೀಡಿದರು.
ಕಡತ ನಾಪತ್ತೆಯಾಗಿ ಎರಡು ತಿಂಗಳುಗಳೇ ಕಳೆದಿದ್ದರೂ ಪೌರಾಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಾಗಿ ವರ್ತಿಸುವ ಸಂದರ್ಭ ಕೆಲವು ಅಡೆತಡೆಗಳು ಎದುರಾಗಿದ್ದು, ಶಿಸ್ತು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು. ಆಗಸ್ಟ್ ತಿಂಗಳಿನಲ್ಲೇ ಕಡತ ನಾಪತ್ತೆಯಾಗಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಲಾಗಿದೆ. ಅಧಿಕಾರಿ ಹರಿಣಿ ಅವರು ಮುಂದಿನ ಒಂದು ವಾರದಲ್ಲಿ ಕಡತವನ್ನು ಪತ್ತೆ ಹಚ್ಚಿ ಕೊಡುವ ಭರವಸೆ ನೀಡಿದ್ದಾರೆ ಎಂದು ಗಮನ ಸೆಳೆದರು. ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಒತ್ತಡ ತರುವ ಹಿನ್ನೆಲೆ ಅಧಿಕಾರಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಸ್ಪಷ್ಟಪಡಿಸಿದರು. ವಿಶೇಷ ತಂಡದ ಮೂಲಕ ಆಡಿಟಿಂಗ್ ನಡೆಸಲು ಮತ್ತು ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಹನುಮಂತ ರಾಜು ಅವರನ್ನು ವಾಪಸ್ಸ್ ಕಳುಹಿಸುವಂತೆ ಮನವಿ ಮಾಡಿ ಸರಕಾರಕ್ಕೆ ಪತ್ರ ಬರೆಯಲಾಗುವುದೆಂದು ತಿಳಿಸಿದರು. ನಾಪತ್ತೆಯಾದ ಕಡತದಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿಗಳಷ್ಟೆ ಇದ್ದು, ಪ್ರಮುಖವಾದ ದಾಖಲೆಗಳಿಲ್ಲ. ಕಡತದಲ್ಲಿದ್ದ ಮಾಹಿತಿ ಆನ್‌ಲೈನ್‌ನಲ್ಲಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಹಾಗೂ ಸದಸ್ಯ ಕೆ.ಎಸ್ ರಮೇಶ್ ಮಾತನಾಡಿ, ಹನುಮಂತ ರಾಜು ಅವರನ್ನೇ ಹೊಣೆಯನ್ನಾಗಿ ಮಾಡಿ ಅಮಾನತು ಮಾಡಬೇಕೆಂದು ಒತ್ತಾಯಿಸಿದರು. ನ.30 ರೊಳಗೆ ಸ್ಥಾಯಿ ಸಮಿತಿ ರಚನೆ:
ಸ್ಥಾಯಿ ಸಮಿತಿಯನ್ನು ರಚಿಸದೆ ಇರುವ ಬಗ್ಗೆ ಸಭೆಯ ಆರಂಭದಲ್ಲೇ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೈಲಾದಲ್ಲಿರುವ ನಿಯಮವನ್ನು ಉಲ್ಲಂಘಿಸಲಾಗಿದ್ದು, ಅವಧಿ ಮೀರಿದ್ದರೂ ಸಮಿತಿ ರಚನೆೆಯಾಗಿಲ್ಲವೆಂದು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದ ನಂತರ ಇದೀಗ ಪ್ರಥಮ ಸಭೆ ನಡೆಯುತ್ತಿದ್ದು, ಎರಡನೇ ಸಭೆಯಲ್ಲಿ ಸ್ಥಾಯಿ ಸಮಿತಿಯನ್ನು ರಚಿಸಲಾಗುವುದೆಂದು ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಸಮಜಾಯಿಷಿಕೆ ನೀಡಿದರು.
ಇದಕ್ಕೆ ಒಪ್ಪಿದ ಬಿಜೆಪಿ ಸದಸ್ಯ ಪಿ.ಡಿ.ಪೊನ್ನಪ್ಪ ಶೀಘ್ರ ಬೈಲಾವನ್ನು ರಚಿಸುವಂತೆ ಅಧ್ಯಕ್ಷರನ್ನು ಒತ್ತಾಯಿಸಿದರು.







