ಲೋಧಾ ಸಮಿತಿ ಶಿಫಾರಸು ಬಿಸಿಸಿಐ ಜಾರಿಗೆ ತರಲಿ:ಶಾಸ್ತ್ರಿ ಕಿವಿಮಾತು
ಹೊಸದಿಲ್ಲಿ, ನ.5: ‘‘ಜಸ್ಟಿಸ್ ಆರ್‌ಎಂ ಲೋಧಾ ಸಮಿತಿಯು ಆಡಳಿತ, ಹಣಕಾಸು ಹಾಗೂ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿ ಮಾಡಿರುವ ಶಿಫಾರಸುಗಳನ್ನು ಬಿಸಿಸಿಐ ಶೇ.80 ರಿಂದ 85ರಷ್ಟು ಜಾರಿಗೆ ತರಲೇಬೇಕು’’ ಎಂದು ಟೀಮ್ ಇಂಡಿಯಾದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಆಗ್ರಹಿಸಿದ್ದಾರೆ.
‘‘ಲೋಧಾ ಸಮಿತಿ ಶಿಫಾರಸು ಮಾಡಿರುವ ಶೇ.80ರಿಂದ 85ರಷ್ಟು ಶಿಫಾರಸುಗಳನ್ನು ಜಾರಿ ತರಲೇಬೇಕು. ಆದರೆ, ಪ್ರಾಯೋಗಿಕವಾಗಿ ಶೇ.15ರಷ್ಟು ಶಿಫಾರಸುಗಳನ್ನು ಜಾರಿಗೆ ತರಲು ಸಮಸ್ಯೆ ಎದುರಾಗುತ್ತದೆ. ಕ್ರಿಕೆಟ್‌ನಲ್ಲಿ ಸುಧಾರಣೆಗಳ ಅಗತ್ಯವಿದೆ. ಕೆಲವೊಂದು ವಿಷಯಗಳಲ್ಲಿ ನಾವು ದಂಡ ತೆರಬೇಕಾಗಬಹುದು’’ ಎಂದು ಶಾಸ್ತ್ರಿ ಹೇಳಿದರು.
‘‘ಬಿಸಿಸಿಐ ಇತ್ತೀಚೆಗೆ ಐದು ವಲಯಗಳಿಂದ ಕೇವಲ ಮೂವರನ್ನು ರಾಷ್ಟ್ರೀಯ ಆಯ್ಕೆ ಸಮಿತಿಗೆ ನೇಮಕ ಮಾಡಿರುವುದು ತಪ್ಪು ನಿರ್ಧಾರ. ಭಾರತದಂತಹ ದೊಡ್ಡ ದೇಶದಲ್ಲಿ ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆಯಬೇಕಾದರೆ, ಕನಿಷ್ಠ ಐವರು ಆಯ್ಕೆಗಾರರು ಐದು ವಲಯಗಳನ್ನು ಪ್ರತಿನಿಧಿಸಬೇಕು’’ ಎಂದು ಶಾಸ್ತ್ರಿ ನುಡಿದರು.
ಬಿಸಿಸಿಐ ಆಡಳಿತಾಧಿಕಾರಿಗಳ ಅಧಿಕಾರದ ಅವಧಿ ಮೂರು ವರ್ಷಕ್ಕೆ ನಿಗದಿಪಡಿಸಿರುವ ಲೋಧಾ ಸಮಿತಿಯ ಶಿಫಾರಸಿಗೆ ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದರು.





