ಚೀನಾವನ್ನು ಮಣಿಸಿದ ಭಾರತ ಏಶ್ಯನ್ ಚಾಂಪಿಯನ್
ಹಾಕಿ:ಮಹಿಳೆಯರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ

ಸಿಂಗಾಪುರ,ನ.5: ಖ್ಯಾತ ಸ್ಟ್ರೈಕರ್ ದೀಪಿಕಾ ಕೊನೆಯ ಕ್ಷಣದಲ್ಲಿ ಬಾರಿಸಿದ ಗೋಲು ನೆರವಿನಲ್ಲಿ ಭಾರತ ಮಹಿಳೆಯರ ನಾಲ್ಕನೆ ಏಶ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಚೀನಾವನ್ನು 2-1 ಅಂತರದಲ್ಲಿ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಆಟ ಕೊನೆಗೊಳ್ಳಲು 20 ಸೆಕೆಂಡ್‌ಗಳು ಬಾಕಿ ಇದ್ದಾಗ ದೀಪಿಕಾ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಜಮೆ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ದೀಪಾ ಗ್ರೇಸ್ ಎಕ್ಕಾ ಅವರು 13ನೆ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶದಲ್ಲಿ ಭಾರತದ ಖಾತೆಗೆ ಗೋಲು ಜಮೆ ಮಾಡಿದ್ದರು.ಇದರೊಂದಿಗೆ ಭಾರತ ಮೊದಲಾರ್ಧದಲ್ಲಿ 1-0 ಮುನ್ನಡೆ ಸಾಧಿಸಿತ್ತು.
ದ್ವಿತೀಯಾರ್ಧದಲ್ಲಿ ಚೀನಾದ ಆಟಗಾರ್ತಿಯರು ತಿರುಗೇಟು ನೀಡಿದರು. ಝಾಂಗ್ ಮೆಂಗ್‌ಲಿಂಗ್ 44ನೆ ನಿಮಿಷದಲ್ಲಿ ಸೊಗಸಾದ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು.
ಅಂತಿಮವಾಗಿ ದೀಪಿಕಾ ಗೋಲು ದಾಖಲಿಸುವುದರೊಂದಿಗೆ ಭಾರತಕ್ಕೆ ಜಯ ತಂದುಕೊಟ್ಟರು. ಕಳೆದ ಶುಕ್ರವಾರ ಭಾರತ ಕೊನೆಯ ಲೀಗ್ ಪಂದ್ಯದಲ್ಲಿ ಚೀನಾ ವಿರುದ್ಧ ಭಾರತ 2-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದರೊಂದಿಗೆ ಚೀನಾ ಅಗ್ರಸ್ಥಾನದೊಂದಿಗೆ ಮತ್ತು ಭಾರತ ಎರಡನೆ ಸ್ಥಾನದೊಂದಿಗೆ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿತ್ತು.
ದಕ್ಷಿಣ ಕೊರಿಯಾವನ್ನು 2-1 ಅಂತರದಲ್ಲಿ ಮಣಿಸಿದ ಜಪಾನ್ ಮೂರನೆ ಸ್ಥಾನ ಗಳಿಸಿದೆ. ಮಲೇಶ್ಯ ಐದನೆ ಸ್ಥಾನ ಪಡೆದಿದೆ.
ಭಾರತ ಕಳೆದ ನಾಲ್ಕು ಅವೃತ್ತಿಗಳಲ್ಲಿ ಇದೇ ಮೊದಲ ಬಾರಿ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. 2013ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಭಾರತವನ್ನು 1-0 ಅಂತರದಲ್ಲಿ ಮಣಿಸಿದ ಜಪಾನ್ ಮೊದಲ ಬಾರಿ ಚಾಂಪಿಯನ್ ಆಗಿತ್ತು.
2010 ಮತ್ತು 2011ರಲ್ಲಿ ದಕ್ಷಿಣ ಕೊರಿಯಾ ಸತತ ಎರಡು ಬಾರಿ ಚಾಂಪಿಯನ್ ಆಗಿತ್ತು. ಭಾರತ ಎರಡು ಆವೃತ್ತಿಗಳಲ್ಲಿ ಮೂರನೆ ಹಾಗೂ ನಾಲ್ಕನೆ ಸ್ಥಾನ ಗಳಿಸಿತ್ತು.





