ದನ ಕಳವು ಆರೋಪಿಗಳ ಬಂಧನ
ಮಂಗಳೂರು, ನ.5: ಮಂಗಳೂರು ನಗರ ಹಾಗೂ ದ. ಕ ಜಿಲ್ಲಾ ವ್ಯಾಪ್ತಿಯಲ್ಲಿ ಹಟ್ಟಿಗೆ ನುಗ್ಗಿ ದನ ಕಳ್ಳತನ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಇಂದು ಪೊಳಲಿ ದ್ವಾರದ ಬಳಿ ಬಂಧಿಸಿದ್ದಾರೆ.
ಬಂಧಿತರನ್ನು ಬಜ್ಪೆ ಕರಂಬಾರು ನಿವಾಸಿ ನವಾಝ್ ಯಾನೆ ಅಬ್ದುಲ್ ನವಾಝ್, ಕೋಟೆಕಾರ್ ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ಮನ್ಸೂರ್, ಪುದು ಗ್ರಾಮದ ಅಮ್ಮೆಮಾರ್ ಮನೆ ಮಾರಿಪಳ್ಳದ ಇಮ್ರಾನ್ (28), ಅದೇ ಗ್ರಾಮದ ಇಮ್ತಿಯಾಝ್ (32), ಅಡ್ಯಾರು ಕೋಟೆಹೌಸ್‌ನ ಬಾತಿಷ್ (30), ಕೋಟೆಕಾರ್ ಕೆ.ಸಿ.ರೋಡ್‌ನ ಅಸ್ಗರ್ ಅಬ್ಬಾಸ್ (30) ಎಂದು ಗುರುತಿಸಲಾಗಿದೆ.
ನವೆಂಬರ್ 1ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವಿನ ಕೊಳವೂರು ಗ್ರಾಮದಲ್ಲಿ 3 ದನಗಳನ್ನು ಕಳ್ಳತನ ಮಾಡಿದ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ದಿನ ಪ್ರಕರಣದ ರೂವಾರಿ ನವಾಝ್ ಕರಂಬಾರು ಎಂಬಾತನನ್ನು ಬಜಪೆ ಪೊಲೀಸ್ ಠಾಣಾ ಪಿಎಸ್ಸೈ ರಾಜರಾಮ್ ಮತ್ತು ತಂಡ ಬಂಧಿಸಲು ಯತ್ನಿಸಿದಾಗ ಆರೋಪಿತರು ಪರಾರಿಯಾಗಿದ್ದರು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ಇಂದು ಬಜಪೆ ಠಾಣಾ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್‌ರ ಸೂಚನೆಯಂತೆ ಪಿಎಸ್ಸೈ ಸತೀಶ್ ಮತ್ತು ಸಿಬ್ಬಂದಿ ಪೊಳಲಿ ದ್ವಾರದ ಬಳಿ ನವಾಝ್ ಅಬ್ದುಲ್ ನವಾಝ್ ಸೇರಿದಂತೆ ಆತನ 5 ಸಹಚರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಸ್ವಿಫ್ಟ್ ಕಾರು, ಒಂದು ರಿಟ್ಝ್ ಹಾಗೂ ಮೊಬೈಲ್ ಇತ್ಯಾದಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







