ಭಾರತಕ್ಕೆ ಕಠಿಣ ಸವಾಲಾಗುತ್ತೇವೆ: ಕುಕ್
ಮುಂಬೈ, ನ.5: ‘‘ಮುಂಬರುವ ಭಾರತ ವಿರುದ್ಧದ ಸರಣಿಯಲ್ಲಿ ನಮ್ಮ ತಂಡ ಅಂಡರ್‌ಡಾಗ್ ಆಗಿದೆ. ಆದರೆ, ಆತಿಥೇಯರಿಗೆ ಸವಾಲು ಒಡ್ಡಲು ಸಜ್ಜಾಗಿದ್ದೇವೆ’’ ಎಂದು ಇಂಗ್ಲೆಂಡ್ ತಂಡದ ನಾಯಕ ಅಲೆಸ್ಟೈರ್ ಕುಕ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳುವ ಮೊದಲು ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು ಮೂರು ದಿನದೊಳಗೆ ಸೋತು ಭಾರೀ ಹಿನ್ನಡೆ ಅನುಭವಿಸಿತ್ತು. ಭಾರತ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ನ.9 ರಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ.
ವಿಶ್ವದ ನಂ.1 ತಂಡ ಭಾರತ 2012ರಲ್ಲಿ ಕುಕ್ ನಾಯಕತ್ವದ ಇಂಗ್ಲೆಂಡ್‌ನ ವಿರುದ್ಧ ಟೆಸ್ಟ್ ಸರಣಿಯನ್ನು 1-2 ರಿಂದ ಸೋತ ಬಳಿಕ ಸ್ವದೇಶಿ ಸರಣಿಯಲ್ಲಿ ಒಂದೂ ಪಂದ್ಯವನ್ನು ಸೋಲದೆ ಅಜೇಯ ದಾಖಲೆ ಕಾಯ್ದುಕೊಂಡಿದೆ.
‘‘ವಿಶ್ವದ ನಂ. ಅಥವಾ ನಂ.2ನೆ ತಂಡದ ವಿರುದ್ಧ ಅದರದೇ ನೆಲದಲ್ಲಿ ಆಡುವುದು ದೊಡ್ಡ ಸವಾಲು. ಭಾರತ ತನ್ನ ನೆಲದಲ್ಲಿ ಯಾವತ್ತೂ ಬಲಿಷ್ಠವಾಗಿರುತ್ತದೆ. ಇದು ನಮಗೆ ದೊಡ್ಡ ಸವಾಲು. ಉಪ ಖಂಡದ ಪಿಚ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡದ ನಮ್ಮ ತಂಡದ ಕೆಲವು ಆಟಗಾರರಿಗೆ ಇದು ದೊಡ್ಡ ಸವಾಲಾಗಿದೆ’’ಎಂದು ಕುಕ್ ಅಭಿಪ್ರಾಯಪಟ್ಟಿದ್ದಾರೆ.







