ತಂದೆಯ ಶವದ ಚಟ್ಟವನ್ನು ಹೊತ್ತ ಪುತ್ರಿಯರು

ವಾರಣಾಸಿ,ನ.5: ಮೃತರ ಅಂತಿಮಕ್ರಿಯೆಗಳನ್ನು ಗಂಡುಮಕ್ಕಳೇ ನಡೆಸುವ ಸಂಪ್ರದಾಯವನ್ನು ಮುರಿದ ವಾರಣಾಸಿಯ ನಾಲ್ವರು ಸೋದರಿಯರು ತಮ್ಮ ತಂದೆಯ ಶವದ ಚಟ್ಟವನ್ನು ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಸಂಸ್ಕಾರಕ್ಕಾಗಿ ಇಲ್ಲಿಯ ಹರಿಶ್ಚಂದ್ರ ಘಾಟ್‌ಗೆ ಸಾಗಿಸುವ ಮೂಲಕ ಪೂರ್ವ ನಿದರ್ಶನವೊಂದಕ್ಕೆ ನಾಂದಿ ಹಾಡಿದ್ದಾರೆ. ಅನಾರೋಗ್ಯದಿಂದ ನಿಧನರಾದ ಯೋಗೀಶಚಂದ್ರ ಉಪಾಧ್ಯಾಯ ಅವರ ಶವವನ್ನು ಪುತ್ರಿಯರಾದ ರಮ್ಯಾ,ಗರಿಮಾ,ಸೌಮ್ಯಾ ಮತ್ತು ಮಹಿಮಾ ತಮ್ಮ ಹೆಗಲುಗಳ ಮೇಲೆ ಹೊತ್ತರೆ, ಗರಿಮಾ ಚಿತೆಗೆ ಅಗ್ನಿಸ್ಪರ್ಶ ನೆರವೇರಿಸಿದರು. ಕುಟುಂಬ ಸದಸ್ಯರು ಮತ್ತು ಬಂಧುಗಳು ಈ ಸೋದರಿಯರಿಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದರು.
ಪುರುಷರು ಮತ್ತು ಮಹಿಳೆಯರನಡುವೆ ಯಾವುದೇ ತಾರತಮ್ಯವಿರಕೂಡದು ಎಂದು ಗರಿಮಾ ಹೇಳಿದರು.
ಲಿಂಗ ಸಮಾನತೆಯ ಸಂದೇಶದ ಮೂಲಕ ಸಮಾಜಕ್ಕೊಂದು ಉದಾಹರಣೆ ಯೊಂದನ್ನು ನೀಡಲು ತಾವು ಬಯಸಿದ್ದೆವು ಎಂದು ಈ ಸೋದರಿಯರು ಹೇಳಿದರು.
Next Story





