ಎಎಫ್‌ಸಿ ಕಪ್ ಫೈನಲ್: ಬೆಂಗಳೂರು ಎಫ್‌ಸಿಗೆ ಸೋಲು

ದೋಹಾ, ನ.5: ಹದಿಮೂರನೆ ಆವೃತ್ತಿಯ ಏಶ್ಯನ್ ಫುಟ್ಬಾಲ್ ಕಾನ್‌ಫೆಡರೇಶನ್ (ಎಎಫ್‌ಸಿ) ಕಪ್ ಟೂರ್ನಮೆಂಟ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು 1-0 ಅಂತರದಲ್ಲಿ ಸೋಲಿಸಿದ ಇರಾಕ್ ನ ಅಲ್ -ಕುವಾ ಅಲ್ ಜಾವಿಯಾ (ಇರಾಕ್ ಏರ‍್ ಫೋರ್ಸ್ )ತಂಡ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಇಲ್ಲಿನ ಸುಹೈಮ್ ಬಿನ್ ಹಾಮದ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 71ನೆ ನಿಮಿಷದಲ್ಲಿ ಹಮ್ಮಾದಿ ಅಹ್ಮದ್ ಏಕೈಕ ಗೋಲು ದಾಖಲಿಸಿ ಅಲ್ -ಕುವಾ ಅಲ್ ಜಾವಿಯಾ ತಂಡಕ್ಕೆ ಗೆಲುವು ತಂದು ಕೊಟ್ಟರು. ಇದರೊಂದಿಗೆ ಚಾಂಪಿಯನ್ ಅಲ್ ಕುವಾ ಅಲ್ ಜಾವಿಯಾ ತಂಡ 6.67 ಕೋಟಿ ರೂ. ಮೊತ್ತದ ಪ್ರಶಸ್ತಿಯನ್ನು ಪಡೆಯಿತು.
ಬೆಂಗಳೂರು ತಂಡಕ್ಕೆ 3.37 ಕೋಟಿ ರೂ. ಪ್ರಶಸ್ತಿ ದೊರೆಯಿತು.
ಉಭಯ ತಂಡಗಳು ಪಂದ್ಯದ ಪ್ರಥಮಾರ್ಧದಲ್ಲಿ ಗೋಲು ಗಳಿಸಲಿಲ್ಲ.ಆದರೆ ದ್ವಿತೀಯಾರ್ಧದಲ್ಲಿ ಅಲ್ -ಕುವಾ ಅಲ್ ಜಾವಿಯಾ ತಂಡ ಗೋಲು ದಾಖಲಿಸಿತು. ಬೆಂಗಳೂರು ಗೋಲು ದಾಖಲಿಸುವಲ್ಲಿ ಎಡವಿತು.
ಸುನೀಲ್ ಛೆಟ್ರಿ ನಾಯಕತ್ವದ ಬೆಂಗಳೂರು ತಂಡ ಮೊದಲ ಬಾರಿ ಫೈನಲ್ ತಲುಪಿತ್ತು. ಭಾರತದ ಯಾವುದೇ ತಂಡ ಈ ಮೊದಲು ಪ್ರಶಸ್ತಿಯ ಸುತ್ತು ತಲುಪಿರಲಿಲ್ಲ. ಈ ಹಿಂದೆ 2008ರಲ್ಲಿ ಡೆಂಪೊ ಮತ್ತು 2013ರಲ್ಲಿ ಈಸ್ಟ್ ಬೆಂಗಾಲ್ ತಂಡಗಳು ಸೆಮಿಫೈನಲ್ ತಲುಪಿರುವುದು ಭಾರತದ ಕ್ಲಬ್‌ಗಳ ಹಿಂದಿನ ಸಾಧನೆಯಾಗಿತ್ತು.





