ಕರಾವಳಿಗೆ ಪ್ರತ್ಯೇಕ ಮರಳು ನೀತಿ, ಸಂಪುಟ ಉಪ ಸಮಿತಿ ಸಭೆ: ಸಚಿವ ಜಯಚಂದ್ರ

ಬೆಂಗಳೂರು, ನ.5: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿನ ಸಮುದ್ರ ಸೇರುವ ಪ್ರದೇಶದಲ್ಲಿನ ಮರಳು ತೆಗೆಯುವ ಸಂಬಂಧ ‘ಪ್ರತ್ಯೇಕ ಮರಳು ನೀತಿ’ ರೂಪಿಸುವ ಸಂಬಂಧ ಆ ಭಾಗದಲ್ಲೇ ಸಂಪುಟ ಉಪ ಸಮಿತಿ ಸಭೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜಯಚಂದ್ರ ಹೇಳಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸಮುದ್ರ ತೀರದಲ್ಲಿ ಮರಳು ತೆಗೆಯುವುದು ಕೇಂದ್ರ ಸರಕಾರದ ವ್ಯಾಪ್ತಿಗೆ ಬರಲಿದೆ. ಅದನ್ನು ಹೊರತುಪಡಿಸಿ ಕರಾವಳಿಯೇತರ ನಿಯಂತ್ರಣ ವಲಯದ ವ್ಯಾಪ್ತಿಯಿಂದ ಮರಳು ತೆಗೆಯಲು ಕ್ರಮ ವಹಿಸಲಾಗುವುದು ಎಂದರು.ಸಂಬಂಧ ಆ ಭಾಗದ ಸಚಿವರು, ಶಾಸಕರು ಹಾಗೂ ಜನಪ್ರತಿನಿಗಳು ಸಿಎಂ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ಸಂಬಂಧ ತನ್ನ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಶೀಘ್ರದಲ್ಲೇ ದಕ್ಷಿಣಕನ್ನಡ ಅಥವಾ ಉಡುಪಿಯಲ್ಲೇ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಆಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ನದಿ ಸಮುದ್ರ ಸೇರುವ ಪ್ರದೇಶದಲ್ಲಿನ ಮರಳು ಬ್ಲಾಕ್‌ಗಳನ್ನು ತೆಗೆಯಲೇಬೇಕು. ಕರಾವಳಿಯ ಹಲವು ಕುಟುಂಬಗಳು ಆ ವೃತ್ತಿಯಲ್ಲಿ ತೊಡಗಿದ್ದು, ದೋಣಿಗಳಲ್ಲಿ ತೆರಳಿ ಮರಳನ್ನು ಸಂಗ್ರಹಿಸಿ ತಂದು ಮಾರಾಟ ಮಾಡುತ್ತಿದ್ದಾರೆ. ಏಕರೂಪದ ಮರಳು ನೀತಿಯಿಂದ ಅವರಿಗೆ ತೊಂದರೆ ಆಗುತ್ತಿದೆ ಎಂದರು.ರಾವಳಿ ಜಿಲ್ಲೆಗಳಿಗೆ ಸೀಮಿತವಾಗಿ ಮರಳು ನೀತಿಯನ್ನು ಅನುಷ್ಠಾನಗೊಳಿಸಲು ಕೆಲವು ಪ್ರಾಯೋಗಿಕ ಸಮಸ್ಯೆಗಳು ಎದುರಾಗುತ್ತಿವೆ. ಮರಳು ನೀತಿಯ ಅನುಷ್ಠಾನದಲ್ಲಿ ಕೆಲವು ಪ್ರಾಯೋಗಿಕ ಸಮಸ್ಯೆಗಳಿವೆ. ಆದುದರಿಂದ ಕರಾವಳಿಗೆ ಪ್ರತ್ಯೇಕ ನೀತಿ ಅಗತ್ಯ ಎಂದರು.
ಕೃತಕ ಮರಳಿಗೆ ಪ್ರೋತ್ಸಾಹ: ಮರಳು ಪೂರೈಕೆಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೊಸ ನಿಯಮಗಳನ್ನು ರೂಪಿಸಿದೆ. ಅಲ್ಲದೆ, ಕೃತಕ ಮರಳು ಉತ್ಪಾದನಾ ಘಟಕ ಸ್ಥಾಪನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಜಯಚಂದ್ರ ಹೇಳಿದರು.





