ಮಂಡ್ಯದಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ
ಮಂಡ್ಯ, ನ.5: ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಶನಿವಾರ ಜಿಲ್ಲೆಗೆ ಆಗಮಿಸಿದ್ದ ಕೇಂದ್ರದ ಹಿರಿಯ ಅಕಾರಿಗಳ ತಂಡವು ಜಿಲ್ಲೆಯ ನಾಗಮಂಗಲ ತಾಲೂಕಿನ ಕೆಲವು ಕಡೆ ಮಾತ್ರ ಅಧ್ಯಯನ ನಡೆಸಿ ತರಾತುರಿಯಲ್ಲಿ ಬೆಂಗಳೂರಿಗೆ ಹೊರಟಿತು.
ನಾಗಮಂಗಲ ತಾಲೂಕಿನ ಚಿಕ್ಕೋನಹಳ್ಳಿ ಪುರ, ಚಿಟ್ಟೇನಹಳ್ಳಿ, ವಡ್ಡರಹಳ್ಳಿ, ಬಿಂಡಿಗನವಿಲೆ, ಮಾಸ್ಕೋನಹಳ್ಳಿ, ಕಾಂತಾಪುರ, ನಾಗಮಂಗಲ, ದೇವಲಾಪುರ, ತಟ್ಟಹಳ್ಳಿ ಗೇಟ್, ಮದ್ದೂರು ತಾಲೂಕಿನ ಜೋಗಿಕೊಪ್ಪಲು, ಸೋಮನಹಳ್ಳಿ ಗೇಟ್, ಕೊಪ್ಪ, ಚನ್ನನದೊಡ್ಡಿ, ಮದ್ದೂರಿಗೆ ತಂಡ ಭೇಟಿ ನೀಡಬೇಕಿತ್ತು. ಆದರೆ, ನಾಗಮಂಗಲ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರವಾಸ ನಡೆಸಿ ರೈತರು, ಅಕಾರಿಗಳು, ಗ್ರಾಮಸ್ಥರಿಂದ ಅಹವಾಲು, ಮಾಹಿತಿ ಸಂಗ್ರಹಿಸಿದ ತಂಡದ ಸದಸ್ಯರು, ಬೆಂಗಳೂರು ಕಡೆಗೆ ತೆರಳಿದರು. ಬೆಳಗ್ಗೆ ನಾಗಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ತಾಲೂಕಿನ ಗಡಿ ಗ್ರಾಮ ಕಿರಿಸಾವೆ ಬಳಿಗೆ ಆಗಮಿಸಿದ ತಂಡವನ್ನು ಜಿಲ್ಲಾಕಾರಿ ಎಸ್.ಝಿಯಾವುಲ್ಲಾ, ಮತ್ತಿತರ ಅಕಾರಿಗಳು ಸ್ವಾಗತಿಸಿದರು.
ನಂತರ, ಚಿಕ್ಕೋನಹಳ್ಳಿಪುರ, ಚಿಟ್ಟೇನಹಳ್ಳಿ ಗ್ರಾಮಕ್ಕೆ ಮೊದಲು ಭೇಟಿ ನೀಡಿದ ತಂಡವು ಮಳೆಯಿಲ್ಲದೆ ಒಣಗಿ ಹೋಗಿದ್ದ ರಾಗಿ ಬೆಳೆಯನ್ನು ವೀಕ್ಷಿಸಿತು. ವಡ್ಡರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ತಂಡಕ್ಕೆ ಗ್ರಾಮದಲ್ಲಿ ಕುಡಿಯುವ ನೀರಿಗೂ ಪರದಾಡುತ್ತಿರುವ ದೃಶ್ಯ ಕಂಡುಬಂದಿತು.
ವಡ್ಡರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿಲ್ಲದ ಕಾರಣ ಟ್ಯಾಂಕರ್ ಮೂಲಕ ಒಂದು ತಿಂಗಳಿಂದ ನೀರು ಪೂರೈಕೆ ಮಾಡುತ್ತಿರುವುದನ್ನು ಅಕಾರಿಗಳು ತಂಡಕ್ಕೆ ವಿವರಿಸಿದರು. ಮಹಿಳೆಯರೂ ತಮ್ಮ ಅಳಲು ತೋಡಿಕೊಂಡರು.
ಭೇಟಿ ರದ್ದು: ನಾಗಮಂಗಲ ತಾಲೂಕಿನ ಇತರ ಗ್ರಾಮಗಳು ಹಾಗೂ ಮದ್ದೂರು ತಾಲೂಕಿನ ಗ್ರಾಮಗಳಿಗೆ ಭೇಟಿ ನಿಗದಿಯಾಗಿತ್ತಾದರೂ ಅಲ್ಲಿನ ಭೇಟಿಯನ್ನು ರದ್ದುಪಡಿಸಿದ ಅಕಾರಿಗಳ ತಂಡ ಬೆಂಗಳೂರು ಕಡೆಗೆ ಸಾಗಿತು.
ತಂಡದಲ್ಲಿ ಹೈದರಾಬಾದ್‌ನ ಎಣ್ಣೆಬೀಜ ವಿಭಾಗದ ನಿರ್ದೇಶಕ ಎಸ್.ಎಂ.ಕೂಲ್ಹಾತ್ಕರ್, ಕೇಂದ್ರದ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ಸತೀಶ್‌ಕುಮಾರ್ ಕಾಂಬೋಜ್, ಕೇಂದ್ರ ಹಣಕಾಸು ಇಲಾಖೆಯ ಜಂಟಿ ನಿರ್ದೇಶಕಿ ಎಸ್.ಎಸ್.ಮೀನಾ ಇದ್ದರು.
ಜಿಲ್ಲಾಕಾರಿ ಎಸ್.ಝಿಯಾವುಲ್ಲಾ, ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನಾ, ಜಿಪಂ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ್, ತೋಟಗಾರಿಕೆ ಉಪ ನಿರ್ದೇಶಕ ರುದ್ರೇಶ್ ಹಾಗೂ ಇತರೆ ಜಿಲ್ಲಾಮಟ್ಟದ ಅಕಾರಿಗಳು ಹಾಜರಿದ್ದರು. ಸಂಸದ ಸಿ.ಎಸ್.ಪುಟ್ಟರಾಜು, ಶಾಸಕರ ಗೈರು ಎದ್ದುಕಾಣುತ್ತಿತ್ತು.







