ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಮೇಲ್ಮನವಿ: ಸಚಿವ ಜಯಚಂದ್ರ
ಕೆಐಎಡಿಬಿ ಭೂ ಹಗರಣ
ಬೆಂಗಳೂರು, ನ. 5: ಕೆಐಎಡಿಬಿ ಭೂ ಹಗರಣ ಸಂಬಂಧ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಲೋಕಾಯುಕ್ತ ಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಈ ಸಂಬಂಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಗಳ ಜತೆ ಮಾತನಾಡಿದ ಅವರು, ಗೃಹ ಇಲಾಖೆ ವ್ಯಾಪ್ತಿಗೆ ಪ್ರಕರಣ ಬರುತ್ತಿದ್ದು, ಈ ಬಗ್ಗೆ ಅಕಾರಿಗಳೊಂದಿಗೆ ಸಮಾಲೋ ಚನೆ ನಡೆಸಿ ಕಾನೂನು ಇಲಾಖೆಗೆ ಅಭಿಪ್ರಾಯ ತಿಳಿಸಲಾಗುವುದು ಎಂದರು.
ತಾಂತ್ರಿಕ ಕಾರಣಗಳ ಆಧಾರದ ಮೇಲೆ ಮಹತ್ವದ ಪ್ರಕರಣಗಳು ಹೈಕೋರ್ಟ್‌ನಲ್ಲಿ ರದ್ದಾಗುತ್ತಿರುವುದು ದುರದೃಷ್ಟಕರ ಎಂದ ಅವರು, ಬಿ.ಎಸ್.ಯಡಿಯೂರಪ್ಪ ವಿರುದ್ಧ ಸುಪ್ರೀಂ ಕೋರ್ಟಿನ ಸಿಇಸಿ ವರದಿ ಆಧರಿಸಿ ಸಿಬಿಐ ಪ್ರಕರಣ ರದ್ದಾಗಿದೆ. ನ್ಯಾಯದ ದೃಷ್ಟಿಯಿಂದ ಕೇಂದ್ರ ಸರಕಾರ ಈ ಬಗ್ಗೆ ಮೇಲ್ಮನವಿ ಸಲ್ಲಿಸಬೇಕೆಂದು ಕೋರಿದರು.ಸ್ಪಿ‡ಪಿ ರಾಜೀನಾಮೆ: ಕೆಐಎಡಿಬಿ ಭೂ ಹಗರಣ ಸಂಬಂಧ ಹೈಕೋರ್ಟಿನಲ್ಲಿ ಲೋಕಾಯುಕ್ತ ಸಂಸ್ಥೆ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವೆಂಕಟೇಶ್ ಪಿ.ದಳವಾಯಿ ರಾಜೀನಾಮೆ ನೀಡಿದ್ದು, ಅವರೊಂದಿಗೆ ಚರ್ಚಿಸಿದ್ದೇನೆ. ಸೋಮವಾರ ಅವರೇ ತನ್ನನ್ನು ಖುದ್ದು ಭೇಟಿ ಮಾಡಲಿದ್ದು, ವಿವರಣೆ ನೀಡಲಿದ್ದಾರೆಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಣೆ ನೀಡಿದರು.
ಸಚಿವ ರೋಷನ್ ಬೇಗ್ ವಿರುದ್ಧ ಸುಳ್ಳು ಆರೋಪ ಮಾಡಿರುವ ಬಿಜೆಪಿಯ ಅಜೆಂಡ ಏನೆಂದು ತಿಳಿಯುತ್ತಿಲ್ಲ. ಸಾವಿನ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಎಲ್ಲವನ್ನು ರಾಜಕೀಯ ದೃಷ್ಟಿಯಿಂದ ನೋಡುವ ಕ್ರಮ ಅಕ್ಷಮ್ಯ ಎಂದು ಸಚಿವ ಜಯಚಂದ್ರ ಟೀಕಿಸಿದರು.
‘ಟಿಪ್ಪು ಜಯಂತಿ ಆಚರಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜಯಂತಿ ಆಚರಣೆಯನ್ನು ಶಾಂತಿಯುತವಾಗಿ ನಡೆಸಬೇಕೆಂಬುದು ರಾಜ್ಯ ಸರಕಾರದ ಬಯಕೆ. ಹೈಕೋರ್ಟ್ ರಾಜ್ಯ ಸರಕಾರಕ್ಕೆ ಯಾವುದೇ ಸೂಚನೆಯನ್ನು ನೀಡಿಲ್ಲ. ಆದರೆ, ಬಿಜೆಪಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ’
-ಟಿ.ಬಿ.ಜಯಚಂದ್ರ, ಸಚಿವ







