‘ಅಂಬೇಡ್ಕರ್ ಸ್ಕೂಲ್ ಆ್ ಇಕನಾಮಿಕ್ಸ್’ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆರಂಭ: ಸಚಿವ ರಾಯರೆಡ್ಡಿ

ಬೆಂಗಳೂರು, ನ.5: ಸಂವಿಧಾನ ಶಿಲ್ಪಿ, ಖ್ಯಾತ ಆರ್ಥಿಕ ತಜ್ಞ ಹಾಗೂ ಸಮಾಜ ಸುಧಾರಕ ಅಂಬೇಡ್ಕರ್ ಅವರ 125ನೆ ಜನ್ಮ ವರ್ಷಾಚರಣೆ ವೇಳೆ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆ್ ಇಕನಾಮಿಕ್ಸ್ ಶಾಲೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಸ್ಕೂಲ್ ಆ್ ಇಕನಾಮಿಕ್ಸ್ ಆರಂಭಕ್ಕೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ 107ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಸಮಿತಿ ರಚನೆ: ಶಾಲೆಗೆ ಕಟ್ಟಡ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಡಾ.ಅಂಬೇಡ್ಕರ್ ಸ್ಕೂಲ್ ಆ್ ಎಕನಾಮಿಕ್ಸ್ ಶಾಲೆಗೆ 50ಎಕರೆ ಜಮೀನನ್ನು ಪಡೆಯಲಾಗಿದೆ. ಡಾ.ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದ ಮೊದಲ ಭಾರತೀಯ ಆದಕಾರಣ ಅವರ ಹೆಸರಿನಲ್ಲೇ ಬೆಂಗಳೂರಿನಲ್ಲಿ ಅಂಬೇಡ್ಕರ್ ಸ್ಕೂಲ್ ಆ್ ಎಕನಾಮಿಕ್ಸ್ ಶಾಲೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಕಾನೂನು ಶಾಲೆಯ ಮುಂಭಾಗದಲ್ಲಿನ ಜಾಗದಲ್ಲೆ ಅಂಬೇಡ್ಕರ್ ಸ್ಕೂಲ್ ಆ್ ಎಕನಾಮಿಕ್ಸ್ ಶಾಲೆಯನ್ನು ಆರಂಭಿಸಲು ಸ್ಥಳವನ್ನು ಗುರುತಿಸಿದ್ದು, ತ್ವರಿತಗತಿಯಲ್ಲಿ ಕಟ್ಟಡ ಕಾಮಗಾರಿ ಸೇರಿದಂತೆ ಶಾಲೆ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.





