ಹಿಲರಿಗೆ ಶೇ.2ರಷ್ಟು ಮುನ್ನಡೆ
ಬಹಿರಂಗ ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಾವೇರಿದ ಸ್ಪರ್ಧೆ

ಫಾಯೆಟ್‌ವಿಲ್ಲೆ,ನ.5: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ತನ್ನ ರಿಪಬ್ಲಿಕನ್ ಎದುರಾಳಿ ಡೊನಾಲ್ಡ್ ಟ್ರಂಪ್ ಎದುರು ಹೊಂದಿದ್ದ ಮುನ್ನಡೆಯು ಈಗ ಶೇ.2ರಷ್ಟು ಅಂಕಗಳಿಗೆ ಕುಸಿಯುವುದರೊಂದಿಗೆ ಶ್ವೇತಭವನದ ಗದ್ದುಗೆಯನ್ನು ಹಿಡಿಯಲು ಈ ಇಬ್ಬರು ಸ್ಪರ್ಧಿಗಳ ನಡುವಿನ ಪೈಪೋಟಿಯು ಇನ್ನಷ್ಟು ತೀವ್ರಗೊಂಡಿದೆ.
ನವೆಂಬರ್ 8ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಸುಮಾರು 20 ಕೋಟಿಗೂ ಅಧಿಕ ಅಮೆರಿಕನ್ ಮತದಾರರು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಈಗಾಗಲೇ 30.50 ಲಕ್ಷ ಮಂದಿ ಚುನಾವಣೆಗೆ ಪೂರ್ವಭಾವಿಯಾಗಿಯೇ ಮತದಾನ ಮಾಡಿದ್ದಾರೆ. (ಅಮೆರಿಕದಲ್ಲಿ ಚುನಾವಣೆಗೆ ಮುಂಚಿತವಾಗಿಯೇ ಮತದಾನ ಮಾಡುವ ಅವಕಾಶವಿದೆ). ಫಾಕ್ಸ್ ನ್ಯೂಸ್ ಸುದ್ದಿಸಂಸ್ಥೆಯು ಶುಕ್ರವಾರ ಪ್ರಕಟಿಸಿದ ನೂತನ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಟ್ರಂಪ್ (ಶೇ.43) ತನ್ನ ಎದುರಾಳಿ ಹಿಲರಿ (ಶೇ.45)ಗಿಂತ ಕೇವಲ ಶೇ.2ರಷ್ಟು ಹಿನ್ನಡೆಯನ್ನು ಹೊಂದಿರುವುದಾಗಿ ತಿಳಿಸಿದೆ.
ಕಳೆದ ವಾರ ಕ್ಲಿಂಟನ್ ಶೇ.3ರಷ್ಟು ಹಾಗೂ ಅಕ್ಟೋಬರ್ ತಿಂಗಳ ಮಧ್ಯ ಭಾಗದಲ್ಲಿಶೇ. 6 ಅಂಕಗಳ ಮುನ್ನಡೆ ಹೊಂದಿದ್ದರು. ಇಮೇಲ್ ಹಗರಣಕ್ಕೆ ಸಂಬಂಧಿಸಿ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಹಿಲರಿ ವಿರುದ್ಧ ತನಿಖೆಯನ್ನು ಹೊಸದಾಗಿ ಆರಂಭಿಸಿರುವುದು ಆಕೆಯ ಮುನ್ನಡೆಗೆ ತೊಡಕಾಗಿದೆಯೆಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.
ಆದರೆ ಈ ಹಗರಣದ ಹಿನ್ನೆಲೆಯಲ್ಲಿ ಆಕೆಯನ್ನು ಬೆಂಬಲಿಸುವುದರಿಂದ ಹಿಂದೆ ಸರಿಯುವ ಮತದಾರರ ಸಂಖ್ಯೆ ಅತ್ಯಂತ ಕನಿಷ್ಠವಾಗಿರುವುದು ಎಂದು ಡೆಮಾಕ್ರಾಟಿಕ್ ಪಕ್ಷದ ಚುನಾವಣಾತಜ್ಞ ಕ್ರಿಸ್ ಆ್ಯಂಡರ್ಸನ್ ತಿಳಿಸಿದ್ದಾರೆ.
ಇನ್ನೊಂದು ಪ್ರಮುಖ ಸುದ್ದಿವಾಹಿನಿ ಸಿಎಎನ್, ತನ್ನ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಹಿಲರಿಗೆ 268 ಇಲೆಕ್ಟೋರಲ್ ಕಾಲೇಜ್(ಕ್ಷೇತ್ರಗಳು) ಮತಗಳು ಲಭಿಸಲಿದೆ. ಆದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು 270 ಇಲೆಕ್ಟೋರಲ್ ಕಾಲೇಜ್ ಮತಗಳ ಅಗತ್ಯವಿದೆ. ನೂತನ ಸಮೀಕ್ಷೆ ಪ್ರಕಾರ ಟ್ರಂಪ್‌ಗೆ ಕೇವಲ 204 ಇಲೆಕ್ಟೋರಲ್ ಕಾಲೇಜ್ ಮತಗಳು ದೊರೆಯಲಿವೆ. ಆದರೆ ಎಫ್‌ಬಿಐ ವರಿಷ್ಠ ಜೇಮ್ಸ್ ಕ್ರೂನಿ ಅವರು ಹಿಲರಿ ಅವರ ಇಮೇಲ್ ಹಗರಣದ ಬಗ್ಗೆ ತನಿಖೆಯನ್ನು ಪುನಾರಂಭಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಟ್ರಂಪ್ ಅವರ ಜನಪ್ರಿಯತೆ ಕಳೆದ ಎರಡು ವಾರಗಳಲ್ಲಿ ತುಸು ಏರಿಕೆಯಾಗಿದೆಯೆಂದು ಸಿಎನ್‌ಎನ್ ತಿಳಿಸಿದೆ. ಆದಾಗ್ಯೂ ಟ್ರಂಪ್ ಜನಪ್ರಿಯತೆಯಲ್ಲಿ ಏರಿಕೆಯಾಗಿರುವ ಹೊರತಾಗಿಯೂ ಚುನಾವಣೆಯಲ್ಲಿ ಹಿಲರಿಯ ಗೆಲುವಿನ ಸಾಧ್ಯತೆ ಶೇ.97.9ರಷ್ಟಿದೆಯೆಂದು ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ.







