ಬಜೆಟ್ ಸಮಿತಿ ಸದಸ್ಯರಾಗಿ ಮಹೇಶ್ ಕುಮಾರ್
ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಇನ್ನೊಂದು ಗರಿ

ವಿಶ್ವಸಂಸ್ಥೆ, ನ.5: ನಿರ್ಣಾಯಕವಾದ ವಿಶ್ವಸಂಸ್ಥೆ ಚುನಾವಣೆಗಳಲ್ಲಿ ಭಾರತವು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ವಿಶ್ವಸಂಸ್ಥೆಯ ಬಜೆಟ್ ಹಾಗೂ ಆಡಳಿತ ಸಲಹಾ ಸಮಿತಿಗೆ ಭಾರತೀಯರಾದ ಮಹೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ಭಾರತೀಯ ನ್ಯಾಯವಾದಿ ಅನಿರುದ್ದ್ ರಜಪೂತ್ ಆಯ್ಕೆಯಾದ ಮಾರನೆಯ ದಿನವೇ ಇನ್ನೊಂದು ಮಹತ್ವದ ಹುದ್ದೆ ಭಾರತೀಯರೊಬ್ಬರಿಗೆ ದೊರೆತಂತಾಗಿದೆ.
ವಿಶ್ವಸಂಸ್ಥೆಗೆ ಭಾರತದ ಖಾಯಂ ನಿಯೋಗದ ಮುಖ್ಯ ಕಾರ್ಯದರ್ಶಿಯಾದ ಮಹೇಶ್ ಕುಮಾರ್ ಶುಕ್ರವಾರ ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಆಯವ್ಯಯ ಪ್ರಶ್ನೆಗಳ (ಎಸಿಎಬಿಕ್ಯೂ) ಕುರಿತ ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ.
ಈ ಸಮಿತಿಯು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಐದನೆ ಸಮಿತಿಗೆ ನೆರವಾಗುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿಶ್ವಸಂಸ್ಥೆಯ ಬಜೆಟ್ ಮತ್ತಿತರ ಆಡಳಿತಾತ್ಮಕ ಉಪಕ್ರಮಗಳನ್ನು ಆದು ಪರಿಶೀಲಿಸುತ್ತದೆ.
ಸಮಿತಿಯ ಸದಸ್ಯರಾಗಿ ಮಹೇಶ್ ಕುಮಾರ್ ಜೊತೆಗೆ ಜಪಾನ್‌ನ ತಾಕೇಶಿ ಅಕಮಾತ್ಸು ಹಾಗೂ ಚೀನಾದ ಯೆ ಕ್ಸಿನಾಂಗ್ ಆಯ್ಕೆಯಾಗಿದ್ದಾರೆ. ಇವರ ಸೇವಾವಧಿಯು ಮೂರು ವರ್ಷಗಳಾಗಿದ್ದು, 2017ರ ಜನವರಿಯಿಂದ ಆರಂಭಗೊಳ್ಳಲಿದೆ.





