ನಕಲಿ ಎನ್‌ಕೌಂಟರ್‌ಗೆ ಗಲ್ಲುಶಿಕ್ಷೆಯೇ ಶಾಸ್ತಿ

ನನ್ನ ಪ್ರಕಾರ ನಕಲಿ ಎನ್‌ಕೌಂಟರ್ ಹತ್ಯೆಗಳಿಗೆ ಗುಂಡುಹಾರಿಸಿದ ಪೊಲೀಸರ ಮೇಲೆ ಮಾತ್ರ ಆರೋಪಪಟ್ಟಿ ಸಲ್ಲಿಸದೇ, ಇದಕ್ಕೆ ಆದೇಶ ನೀಡುವ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧವೂ ಸಲ್ಲಿಸಬೇಕು.
‘‘ಭಾರತೀಯ ಪೊಲೀಸ್ ಪಡೆಯ ಅಪರಾಧ ದಾಖಲೆಗಳ ಮುಂದೆ ಇಡೀ ದೇಶದ ಯಾವುದೇ ಒಂದು ಸಂಘಟಿತ ಅಪರಾಧ ಗುಂಪಿನ ಅಪರಾಧ ಕೃತ್ಯದ ದಾಖಲೆ ಹತ್ತಿರಕ್ಕೂ ಸುಳಿಯಲಾರದು ಎನ್ನುವುದನ್ನು ನಾನು ಜವಾಬ್ದಾರಿಯುತವಾಗಿಯೇ ಹೇಳುತ್ತಿದ್ದೇನೆ’’
- ಇವು 1960ರ ದಶಕದಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎ.ಎನ್.ಮುಲ್ಲಾ ಅವರ ತೀರ್ಪಿನಲ್ಲಿ ಉಲ್ಲೇಖವಾದ ಅಣಿಮುತ್ತುಗಳು.
ಆದರೆ ಇದು ತೀರಾ ವಿಸ್ತೃತವಾಗಿ ಸಾರ್ವತ್ರಿಕಗೊಳಿಸುವ ಕ್ರಮ ಎಂಬ ಕಾರಣಕ್ಕೆ ಈ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಅಳಿಸಿ ಹಾಕಿದೆ. ನಿಸ್ಸಂದೇಹವಾಗಿ ಕೆಲ ಪ್ರಾಮಾಣಿಕ, ಗೌರವಾರ್ಹ ಪೊಲೀಸರೂ ಇದ್ದಾರೆ. ಆದರೆ ಬಹುತೇಕ ಭಾರತೀಯ ಪೊಲೀಸ್ ಪಡೆ ತನ್ನ ಕುಕೃತ್ಯಗಳಿಂದಲೇ ಹೆಸರುವಾಸಿ. ಹಫ್ತಾ ವಸೂಲಿ, ನಕಲಿ ಎನ್‌ಕೌಂಟರ್, ಎಫ್‌ಐಆರ್ ದಾಖಲಿಸಲು ನಿರಾಕರಿಸುವುದು, ಹಣ ನೀಡದಿದ್ದರೆ ಸೂಕ್ತ ತನಿಖೆ ನಡೆಸದಿರುವುದು, ಕಸ್ಟಡಿ ಸಾವು, ಕಸ್ಟಡಿ ಚಿತ್ರಹಿಂಸೆಯಂಥ ಪೊಲೀಸ್ ಕೃತ್ಯಗಳು ಬಹುತೇಕ ಭಾರತೀಯರ ಸ್ವಂತ ಅನುಭವಕ್ಕೂ ಬಂದಿರುತ್ತವೆ.
ಇದೀಗ ಭೋಪಾಲ್ ಎನ್‌ಕೌಂಟರ್ ವಿಚಾರಕ್ಕೆ ಬರೋಣ. ನನ್ನ ಪ್ರಕಾರ ಇದು ನಿಸ್ಸಂದೇಹವಾಗಿ ನಕಲಿ. ಕೆಳಗಿನ ಸತ್ಯಾಂಶಗಳನ್ನು ಗಮನಿಸಿ.
1. ಜೈಲಿನಿಂದ ತಪ್ಪಿಸಿಕೊಂಡ ಸಿಮಿ ಸಂಘಟನೆಯ ಎಂಟು ಮಂದಿ ವಿಚಾರಣಾಧೀನ ಕೈದಿಗಳಲ್ಲಿ ಯಾವ ಶಸ್ತ್ರಾಸ್ತ್ರವೂ ಇರಲಿಲ್ಲ ಹಾಗೂ ಯಾವ ಪೊಲೀಸರಿಗೂ ಎನ್‌ಕೌಂಟರ್ ವೇಳೆ ಗಾಯಗಳೂ ಆಗಿಲ್ಲ ಎಂದು ಭಯೋತ್ಪಾದಕ ನಿಗ್ರಹ ಪಡೆಯ ಇನ್‌ಸ್ಪೆಕ್ಟರ್ ಜನರಲ್ ಸಂಜೀವ್ ಶಮಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಹೀಗೆ ಪಲಾಯನಕ್ಕೆ ಮುಂದಾದವರನ್ನು ನಿರ್ದಯವಾಗಿ ಸಾಯಿಸಿದ್ದು ಎನ್ನುವುದು ಖಚಿತ.
2. ಮಧ್ಯಪ್ರದೇಶದ ಗೃಹಸಚಿವ ಭೂಪೇಂದ್ರ ಸಿಂಗ್ ಅವರ ಪ್ರಕಾರ, ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳ ಕೈಯಲ್ಲಿದ್ದುದು ಕೇವಲ ಚಮಚ ಮತ್ತು ಪ್ಲೇಟ್.
3. ಕಲ್ಲಿನ ಮೇಲೆ ನಿಂತಿದ್ದ ಐದು ಮಂದಿ ಕೈಬೀಸುತ್ತಿರುವ ಮತ್ತು ಪೊಲೀಸರು, ‘‘ನಿಲ್ಲಿ. ಈ ಐದು ಮಂದಿ ನಮ್ಮ ಜತೆ ಮಾತನಾಡಲು ಮುಂದಾಗಿದ್ದಾರೆ. ಅವರು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಸುತ್ತುವರಿಯಿರಿ’’ ಎಂದು ಕೂಗಿಹೇಳುವ ದೃಶ್ಯ ಒಂದು ವೀಡಿಯೊ ತುಣುಕಿನಲ್ಲಿ ದಾಖಲಾಗಿದೆ.
4. ಮತ್ತೊಂದು ವೀಡಿಯೊ ತುಣುಕಿನಲ್ಲಿ, ಎಂಟು ಮಂದಿಯ ಮೇಲೆ ಪೊಲೀಸರು ಗುಂಡಿನ ಮಳೆಗೆರೆಯುತ್ತಿರುವ ದೃಶ್ಯ ಇದೆ. ಬಹುಶಃ ಇವರ ಪೈಕಿ ಕೆಲವರು ಆ ಕ್ಷಣದ ವರೆಗೂ ಜೀವಂತವಿದ್ದು, ನೆಲದ ಮೇಲೆ ಬಿದ್ದಿದ್ದರು.
5. ‘‘ಜಿಂದಾ ಹೈ ಮಾರೊ’’ ‘‘ಆತನ ಎದೆ ಮೇಲೆ ಹೊಡೆಯಿರಿ. ಆಗ ಮಾತ್ರ ಆತ ಸಾಯುತ್ತಾನೆ’’ ಎಂದು ಕೂಗಿ ಹೇಳುವ ಧ್ವನಿ ಮತ್ತೊಂದು ವೀಡಿಯೊ ತುಣುಕಿನಲ್ಲಿ ದಾಖಲಾಗಿದೆ.
ಪ್ರಕಾಶ್ ಕದಂ ಹಾಗೂ ರಾಮಪ್ರಸಾದ್ ವಿಶ್ವನಾಥ್ ಗುಪ್ತ ಪ್ರಕರಣದಲ್ಲಿ, ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಕಡ್ಡಾಯವಾಗಿ ಗಲ್ಲುಶಿಕ್ಷೆ ವಿಧಿಸಬೇಕು ಎಂದು ನ್ಯಾಯಮೂರ್ತಿ ಜ್ಞಾನಸುಧಾ ಮಿಶ್ರ ಹಾಗೂ ನಾನು ಇದ್ದ ಸುಪ್ರೀಂಕೋರ್ಟ್ ಪೀಠ ತೀರ್ಪು ನೀಡಿತ್ತು. ಆ ತೀರ್ಪಿನ ಪ್ರಸ್ತುತ ಎನಿಸುವ ಅಂಶಗಳನ್ನು ಇಲ್ಲಿ ನೀಡುವುದು ಸೂಕ್ತ ಎನಿಸುತ್ತದೆ.
‘‘ನಮ್ಮ ಪ್ರಕಾರ, ಅರ್ಜಿದಾರ ಆರೋಪಿಗೆ ಜಾಮೀನು ನಿರಾಕರಿಸಿರುವ ಹೈಕೋರ್ಟ್ ಕ್ರಮ ಸರಿಯಾಗಿದೆ. ಅರ್ಜಿದಾರರು ಪೊಲೀಸ್ ಸಿಬ್ಬಂದಿಯಾಗಿದ್ದು, ಕಾನೂನು ಎತ್ತಿಹಿಡಿಯುವುದು ಅವರ ಕರ್ತವ್ಯ. ಆದರೆ ತಮ್ಮ ಜವಾಬ್ದಾರಿ ನಿರ್ವಹಿಸುವುದರಿಂದ ಮುಂದಕ್ಕೆ ಹೋಗಿ ಅವರು ಅಪರಾಧಿಗಳಂತೆ ಕಂಡುಬರುತ್ತಿದ್ದಾರೆ. ಹೀಗೆ ರಕ್ಷಕರೇ ಭಕ್ಷಕರಾಗಿದ್ದಾರೆ. ಬೈಬಲ್ ಹೇಳುವಂತೆ, ಉಪ್ಪು ತನ್ನ ರುಚಿ ಕಳೆದುಕೊಂಡರೆ, ಅದು ಉಪ್ಪಾಗಿರಲು ಹೇಗೆ ಸಾಧ್ಯ? ಅಥವಾ ಪ್ರಾಚೀನ ರೋಮನ್ನರ ಹೇಳಿಕೆಯಂತೆ ಪರಭಕ್ಷಕ ರಕ್ಷಕರನ್ನು ಕಾಯುವವರು ಯಾರು?’’
‘‘ವಿಚಾರಣೆ ವೇಳೆ ಪೊಲೀಸರು ನಕಲಿ ಎನ್‌ಕೌಂಟರ್ ಎಸಗಿರುವುದು ಸಾಬೀತಾದರೆ ಇದು ತೀರಾ ಅಪರೂಪದ ಪ್ರಕರಣ ಎಂದು ಪರಿಗಣಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ನಕಲಿ ಎನ್‌ಕೌಂಟರ್ ಎನ್ನುವುದು ಕಾನೂನು ರಕ್ಷಿಸಬೇಕಾದವರು ಮಾಡುವ ನಿರ್ದಯ ಹಾಗೂ ಕ್ರೂರ ಹತ್ಯೆ. ನಮ್ಮ ಪ್ರಕಾರ, ಒಬ್ಬ ಸಾಮಾನ್ಯ ಮನುಷ್ಯ ಅಪರಾಧ ಎಸಗಿದರೆ, ಅದಕ್ಕೆ ಸಾಮಾನ್ಯ ಶಿಕ್ಷೆ ನೀಡಬೇಕು. ಆದರೆ ಪೊಲೀಸರೇ ಅಪರಾಧ ಎಸಗಿದರೆ, ಅವರಿಗೆ ಹೆಚ್ಚು ಕಠಿಣ ಶಿಕ್ಷೆ ವಿಧಿಸಬೇಕು. ಏಕೆಂದರೆ ಅವರು ತಮ್ಮ ಕರ್ತವ್ಯಕ್ಕೆ ವಿರುದ್ಧವಾದ ಕೃತ್ಯ ಎಸಗಿರುತ್ತಾರೆ’’
‘‘ಆದ್ದರಿಂದ ಎನ್‌ಕೌಂಟರ್ ಹೆಸರಿನಲ್ಲಿ ಪೊಲೀಸರು ತಮ್ಮ ಮೇಲಧಿಕಾರಿ ಅಥವಾ ರಾಜಕಾರಣಿಗಳ ಸೂಚನೆಯಂತೆ ಹತ್ಯೆ ಮಾಡಿದರೂ ಅದು ಅಕ್ಷಮ್ಯ ಎನ್ನುವ ಎಚ್ಚರಿಕೆಯನ್ನು ನಾವು ನೀಡುತ್ತಿದ್ದೇವೆ. ನಾಝಿ ಯುದ್ಧಾಪರಾಧಿಗಳ ನುರೆಮ್‌ಬರ್ಗ್ ವಿಚಾರಣೆಯಲ್ಲಿ ಸ್ಪಷ್ಟಪಡಿಸಿದಂತೆ ಆದೇಶ ಎಂದರೆ ಆದೇಶ. ನಿಸ್ಸಂದೇಹವಾಗಿ ಅವರನ್ನು ಗಲ್ಲಿಗೇರಿಸಬೇಕು. ಒಬ್ಬ ಪೊಲೀಸ್ ಪೇದೆಗೆ ಕಾನೂನುಬಾಹಿರವಾಗಿ ನಕಲಿ ಎನ್‌ಕೌಂಟರ್ ಆದೇಶ ನೀಡಿದರೆ, ಕಾನೂನುಬಾಹಿರ ಆದೇಶ ಪಾಲಿಸಲು ನಿರಾಕರಿಸುವುದು ಆತನ ಹಕ್ಕು. ಇಲ್ಲದಿದ್ದರೆ ಆತನ ಮೇಲೆ ಹತ್ಯೆ ಪ್ರಕರಣ ದಾಖಲಾಗುತ್ತದೆ. ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಎನ್‌ಕೌಂಟರ್ ಸಿದ್ಧಾಂತ ಎನ್ನುವುದು ಅಪರಾಧ ಸಿದ್ಧಾಂತ ಎನ್ನುವುದನ್ನು ಎಲ್ಲ ಪೊಲೀಸರೂ ಅರ್ಥ ಮಾಡಿಕೊಳ್ಳಬೇಕು. ಜನರನ್ನು ನಾವು ಎನ್‌ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಬಹುದು ಎಂದು ಯೋಚಿಸುವ ಪೊಲೀಸರು, ಬಂದೂಕು ಗುಂಡಿ ಅದುಮುವ ಮುನ್ನ ತಮಗೆ ಗಲ್ಲು ಶಿಕ್ಷೆ ಕಾದಿದೆ ಎಂದೂ ಯೋಚಿಸಬೇಕು’’
ಆದ್ದರಿಂದ ನಕಲಿ ಎನ್‌ಕೌಂಟರ್ ಹತ್ಯೆಗಳಿಗೆ ಗುಂಡುಹಾರಿಸಿದ ಪೊಲೀಸರ ಮೇಲೆ ಮಾತ್ರ ಆರೋಪಪಟ್ಟಿ ಸಲ್ಲಿಸದೇ, ಇದಕ್ಕೆ ಆದೇಶ ನೀಡುವ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧವೂ ಸಲ್ಲಿಸಬೇಕು ಎನ್ನುವುದು ನನ್ನ ಸ್ಪಷ್ಟ ಆಗ್ರಹ.





