ಇನ್ನೊಂದು ನ್ಯೂಸ್ ಚಾನಲ್ ಮೇಲೂ ಒಂದು ದಿನದ ನಿರ್ಬಂಧ ಹಾಕಿದ ಕೇಂದ್ರ

ಹೊಸದಿಲ್ಲಿ, ನ.6: ಎನ್‌ಡಿಟಿವಿ ಪ್ರಸಾರದ ಮೇಲೆ ನಿಷೇಧ ಹೇರಿರುವ ಕ್ರಮದ ವಿರುದ್ಧ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಕೇಂದ್ರ ಸರಕಾರ ಅಸ್ಸಾಂ ಮೂಲದ ಟಿವಿ ಸುದ್ದಿವಾಹಿನಿಯೊಂದರ ಮೇಲೆ ಒಂದು ದಿನದ ನಿಷೇಧ ಹೇರಿದೆ.
ಮನೆಗೆಲಸ ವೇಳೆ ಕ್ರೌರ್ಯ ಹಾಗೂ ಚಿತ್ರಹಿಂಸೆಗೀಡಾದ ಅಪ್ರಾಪ್ತ ವಯಸ್ಸಿನ ಮಗುವಿನ ಗುರುತು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಮುಂದಿನ ವಾರ ಒಂದು ದಿನದ ಮಟ್ಟಿಗೆ ಟಿವಿ ಪ್ರಸಾರವನ್ನು ನಿಲ್ಲಿಸಲು ಸೂಚಿಸಲಾಗಿದೆ.
ನ್ಯೂಸ್ ಟೈಂ ಅಸ್ಸಾಂ ಸುದ್ದಿವಾಹಿನಿ ಇತರ ಎರಡು ಉಲ್ಲಂಘನೆಗಳನ್ನು ಎಸಗಿರುವುದನ್ನೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೇಮಕ ಮಾಡಿರುವ ಅಂತರ ಸಚಿವಾಲಯ ಸಮಿತಿ ಉಲ್ಲೇಖಿಸಿದೆ. ಶವಗಳ ಭಯಾನಕ ದೃಶ್ಯಾವಳಿಯನ್ನು ಪ್ರಸಾರ ಮಾಡಿರುವುದು ಹಾಗೂ ಮಹಿಳೆಯರ ವಿರುದ್ಧದ ಆಕ್ಷೇಪಾರ್ಹ ಕಾರ್ಯಕ್ರಮ ಪ್ರಸಾರ ಮಾಡಿದ ಆರೋಪ ಕೂಡಾ ಹೊರಿಸಲಾಗಿದೆ.’
ಕಳೆದ ಜನವರಿ ತಿಂಗಳಲ್ಲಿ ಪಠಾಣ್‌ಕೋಟ್ ಉಗ್ರ ದಾಳಿಯ ಸಂದರ್ಭ ಭದ್ರತಾ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡಿದ ಆರೋಪದಲ್ಲಿ ಎನ್‌ಡಿಟಿವಿ ವಿರುದ್ಧ ನಿಷೇಧ ಹೇರಲಾಗಿತ್ತು.
ಎರಡೂ ವಾಹಿನಿಗಳು ನವೆಂಬರ್ 9ರಂದು ಮಧ್ಯರಾತ್ರಿಯಿಂದ ನವೆಂಬರ್ 10ರಂದು ಮಧ್ಯರಾತ್ರಿವರೆಗೆ ಪ್ರಸಾರ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಅಸ್ಸಾಂ ವಾಹಿನಿ ವಿರುದ್ಧ ಕಾರ್ಮಿಕ ಕಲ್ಯಾಣ ಆಯುಕ್ತರು ಮೊದಲು ದೂರು ದಾಖಲಿಸಿದ್ದರು. 2013ರ ಅಕ್ಟೋಬರ್‌ನಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಮಗುವಿನ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಗುರುತು ಬಹಿರಂಗಪಡಿಸಿರುವುದು ಆಕ್ಷೇಪಾರ್ಹ ಎಂದು ಹೇಳಲಾಗಿತ್ತು.







