ಮೋದಿ ಸರಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ರಾಜ್ ನಾಥ್ ಸಿಂಗ್

ರಾಯ್ ಪುರ, ನ.6: ಭಯೋತ್ಪಾದನೆ ಮತ್ತು ಉಗ್ರರಿಗೆ ನೆರವು ನೀಡುವ ಮೂಲಕ ಪಾಕಿಸ್ತಾನವು ಪ್ರಧಾನ ಮಂತ್ರಿ ನರೆಂದ್ರ ಮೋದಿ ಸರಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಸುತ್ತಿದೆ. ಆದರೆ ಭಾರತವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಇಂದು ಗುಡುಗಿದ್ದಾರೆ.
ಛತ್ತಿಸ್ ಗಢದ 16ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಯೋತ್ಪಾದನೆ ಧೀರರ ಅಸ್ತ್ರವಲ್ಲ. ಅದು ಹೇಡಿಗಳ ಅಸ್ತ್ರ. ಈ ವಿಚಾರವನ್ನು ಪಾಕಿಸ್ತಾನ ಇನ್ನೂ ಅರಿತಿಲ್ಲ. ಎಂದು ಅವರು ಹೇಳಿದರು.
"ಉರಿ ದಾಳಿಯ ಬಳಿಕ , ಸರ್ಜಿಕಲ್ ದಾಳಿಯನ್ನು ಭಾರತ ಯಶಸ್ವಿಯಾಗಿ ನಡೆಸಿತು.ನಮ್ಮ ಯೋಧರು ಅದ್ಭುತ ಕೆಲಸ ಮಾಡಿದರು. ಯಾರ ಎದುರೂ ಭಾರತ ತಲೆತಗ್ಗಿಸಲು ನಮ್ಮ ಸರಕಾರ ಅವಕಾಶ ನೀಡುವುದಿಲ್ಲ, ಭಾರತವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.
"ಛತ್ತೀಸ್‌ಗಡ ಅಭಿವೃದ್ಧಿಗೆ ಮಾವೋವಾದಿಗಳು ಅಡ್ಡಿಪಡಿಸುತ್ತಿದ್ದಾರೆ. ಇವರ ವಿರುದ್ಧ ಹೋರಾಟಕ್ಕೆ ಕೇಂದ್ರ ಸರಕಾರ ಸಾಧ್ಯವಿರುವ ಎಲ್ಲ ನೆರವು ನೀಡಲಿದೆ ಎಂದು ರಾಜ್‌ನಾಥ್ ಸಿಂಗ್ ಹೇಳಿದರು.





