ತಾನೇ ನೀಡಿದ ದೂರಿನಲ್ಲಿ ಜಾಮೀನುರಹಿತ ವಾರಂಟ್ ಪಡೆದ ಡಿವೈಎಸ್ಪಿ

ಮಲಪ್ಪುರಂ, ನವೆಂಬರ್ 6: ಅಧಿಕೃತ ರಹಸ್ಯವನ್ನು ಸೋರಿಕೆ ನಡೆಸಲಾಗಿದೆ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತರ ವಿರುದ್ಧ ಡಿವೈಎಸ್ಪಿ ನೀಡಿದ್ದ ದೂರಿನಲ್ಲಿ ಸ್ವತಃ ಡಿವೈಎಸ್ಪಿ ವಿರುದ್ಧವೇ ಜಾಮೀನುರಹಿತ ವಾರಂಟ್ ಹೊರಡಿಸಲಾದ ಘಟನೆ ವರದಿಯಗಿದೆ. ಕ್ರೈಂಬ್ರಾಂಚ್ ಇನ್‌ವೆಸ್ಟಿಗೆಶನ್ ಡಿಪಾರ್ಟ್‌ಮೆಂಟ್ ಐಎಸ್‌ಐಟಿ ವಿಭಾಗ ಡಿವೈಎಸ್ಪಿ ಎಸ್. ಅಭಿಲಾಷ್ ವಿರುದ್ಧ ಮಲಪ್ಪುರಂ ಜ್ಯುಡಿಶಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟು ವಾರಂಟ್ ಹೊರಡಿಸಿದೆ.
ಅಕ್ಟೋಬರ್ 20ರಂದು ಪ್ರಕರಣದ ಒಂದನೆ ಸಾಕ್ಷಿ ಡಿವೈಎಸ್ಪಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟು ವಾರಂಟ್ ಹೊರಡಿಸಿದೆ. 2013ರಲ್ಲಿ ಅಭಿಲಾಷ್ ಮಲಪ್ಪುರಂ ಡಿವೈಎಸ್ಪಿ ಆಗಿದ್ದಾಗ ಅಂದಿನ ಕರಿಪ್ಪೂರ್ ಎಸೈ.ಕೆ. ಶ್ರೀಕುಮಾರ್ ಮತ್ತು ಕೊಂಡೊಟ್ಟಿ ಸರ್ಕಲ್ ಆಗಿದ್ದ ಎ. ಪ್ರೇಂಜಿತ್ ವಿರುದ್ದ ಮಾಹಿತಿಹಕ್ಕು ಕಾರ್ಯಕರ್ತ ಮನೋಜ್ ಕೇದಾರಂ ಸೇವಾಹಕ್ಕುಪ್ರಕಾರ ನೀಡಿದ್ದ ದೂರು ಅಧಿಕಾರಿಯನ್ನು ಕುಣಿಕೆಯಲ್ಲಿ ಸಿಲುಕಿಸಿದಂತಾಗಿದೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪೆರಿಂಙಾವ ಶಾಲಾ ಅಧ್ಯಾಪಕನ ವಿರುದ್ಧ ಎಸೈ ಮತ್ತು ಸಿಐ ಕ್ರಮಕೈಗೊಂಡಿಲ್ಲ ಎಂದು ಬೆಟ್ಟು ಮಾಡಿ ಮನೋಜ್ ಸೇವಾಹಕ್ಕು ಕಾನೂನು ಪ್ರಕಾರ ಎರಡನೆ ದೂರನ್ನು ಅಫೀಲು ಅಧಿಕಾರಿ ಕೂಡಾ ಆಗಿದ್ದ ಡಿವೈಎಸ್ಪಿ ಅಭಿಲಾಷ್‌ರಿಗೆ ಸಲ್ಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಡಿವೈಎಸ್ಪಿ ಎಸ್ಸೈ ಮತ್ತು ಸಿಐಗೆ ಎಚ್ಚರಿಕೆಯನ್ನು ಮಾತ್ರ ನೀಡಿದ್ದರು. ಇದು ಸೇವಾಹಕ್ಕು ನಿಯಮದ ಉಲ್ಲಂಘನೆಯಾಗಿದೆ ಎಂದು ಮನೋಜ್ ಡಿವೈಎಸ್ಪಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು. ಇದಕ್ಕೆ 2013 ಆಗಸ್ಟ್ 14ಕ್ಕೆ ಡಿವೈಎಸ್ಪಿ ಉತ್ತರ ನೀಡಿದ್ದರು. ನಂತರ ಅದೇ ತಿಂಗಳು 18,19ಕ್ಕೆ ಮಲಪ್ಪುರಂ ಡಿವೈಎಸ್ಪಿ ಕಚೇರಿಗೆ ಮನೋಜ್‌ರನ್ನು ಕರೆಯಿಸಿ ಅಫೀಲಿನ ಸಂಶಯವನ್ನು ನಿವಾರಿಸಿ ಕಳುಹಿಸಿಕೊಟ್ಟಿದ್ದರು. ಆದರೆ ಅಫೀಲಿಗೆ ಉತ್ತರ ನೀಡಿದ ಬಳಿಕ ಸ್ಟೇಶನ್‌ಗೆ ಕರೆದದ್ದರಲ್ಲಿ ಸಂದೇಹವಾಗಿ ಫೋನ್‌ನಲ್ಲಿ ವಾಯ್ಸ್ ರಿಕಾರ್ಡ್ ಇರಿಸಿ ಡಿವೈಎಸ್ಪಿಯ ಮುಂದೆ ಹಾಜರಾಗಿದ್ದರು. ನಂತರ ಡಿವೈಎಸ್ಪಿ ಮನೋಜ್ ವಿರುದ್ಧ ಕೋರ್ಟಿಗೆ ಮಾಹಿತಿ ತಂತ್ರಜ್ಞಾನ(ಐಟಿ) ಕಾನೂನಿನ 72,72(ಎ) ಕಲಂ ಪ್ರಕಾರ ಕೇಸು ದೂರು ನೀಡಿದ್ದರು.
ಆದರೆ 19ರಂದು ನಡೆದ ಘಟನೆಗೆ 23ರಂದು ಡಿವೈಎಸ್ಪಿ ದೂರು ನೀಡಿದ್ದರು. ಪೊಲೀಸ್ ದೂರು ಪ್ರಾಧಿಕಾರದಲ್ಲಿ ಡಿವೈಎಸ್ಪಿ ವಿರುದ್ಧ ಮನೋಜ್ ಕೂಡಾದೂರು ನೀಡಿದ್ದರು. ತೃಶೂರ್ ಪೊಲೀಸ್ ಅಕಾಡಮಿಯ ಐಟಿ ಅಧ್ಯಾಪಕಿಯೊಂದಿಗೆ ಕಾನೂನು ಸಲಹೆ ಪಡೆದದ್ದರಿಂದ ದೂರು ನೀಡಲು ತಡವಾಯಿತು ಎಂದು ಪ್ರಾಧಿಕಾರದ ಮುಂದೆ ಡಿವೈಎಸ್ಪಿ ಕಾರಣ ತಿಳಿಸಿದ್ದರು. ಆದರೆ ವಿವರಣೆ ನೀಡಿದ ಸಮಯದಲ್ಲಿ ಅಕಾಡಮಿಯಲ್ಲಿ ಡಿವೈಎಸ್ಪಿ ಹೇಳಿದ ಅಧ್ಯಾಪಕಿ ಕೆಲಸ ಮಾಡುತ್ತಿರಲಿಲ್ಲ ಎಂದು ವರದಿ ತಿಳಿಸಿದೆ.







