ನಕ್ಸಲ್ ಚಟುವಟಿಕೆ ವಿರೋಧಿಸಿದ ಆದಿವಾಸಿಯ ಹತ್ಯೆ

ರಾಯಪುರ,ನ.6: ಛತ್ತೀಸ್‌ಗಡದ ನಕ್ಸಲ್‌ಪೀಡಿತ ಸುಕ್ಮಾ ಜಿಲ್ಲೆಯ ನಾಮಾ ಗ್ರಾಮದಲ್ಲಿ ಮಾವೋವಾದಿ ಚಟುವಟಿಕೆಗಳ ವಿರುದ್ಧದ ಪ್ರತಿಭಟನೆಯ ಮುಂಚೂಣಿ ಯಲ್ಲಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ ಶಾಮನಾಥ ಬಾಘೆಲ್(28)ಎಂಬಾತನನ್ನು ಬಂಡುಕೋರರು ಹತ್ಯೆಗೈದಿದ್ದಾರೆ.
ಬಾಘೆಲ್‌ನನ್ನು ಶುಕ್ರವಾರ ತಡರಾತ್ರಿ ಹರಿತವಾದ ಆಯುಧಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಇಂದು ತಿಳಿಸಿದರು.
ನಾಮಾ ಮತ್ತು ನೆರೆಯ ಕುಮಾಕೊಲೆಂಗ್ ಗ್ರಾಮಗಳ ಯುವಜನರು ತಮ್ಮ ಗ್ರಾಮ ಗಳಲ್ಲಿ ನಕ್ಸಲ್ ಚಟುವಟಿಕೆಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಯುವಕರು ಬಂಡುಕೋರರ ಪ್ರವೇಶವನ್ನು ತಡೆಯಲು ಬಿಲ್ಲು-ಬಾಣ ಮತ್ತು ಇತರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾಗಿ ರಾತ್ರಿಯಡೀ ಗಸ್ತು ನಡೆಸುತ್ತಿದ್ದಾರೆ.
ಬಾೆಲ್ ಮತ್ತು ಆತನ ಸ್ನೇಹಿತ ಆಯ್ತ ಪ್ರತಿಭಟನೆಯ ನೇತೃತ್ವ ವಹಿಸಿದ್ದು,ರಾತ್ರಿ ಗಸ್ತಿನ ಸಮಯ ಹೆಚ್ಚಾಗಿ ಮನೆಯಿಂದ ಹೊರಗೇ ಇರುತ್ತಿದ್ದರು.
ಶುಕ್ರವಾರ ತನ್ನ ನವಜಾತ ಕಂದ ಮತ್ತು ಪತ್ನಿಯನ್ನು ನೋಡಿಕೊಳ್ಳಲು ಬಾಘೆಲ್ ಮನೆಯಲ್ಲಿಯೇ ಇದ್ದ. ತಡರಾತ್ರಿಯಲ್ಲಿ ಮನೆಗೆ ನುಗ್ಗಿದ ಶಸ್ತ್ರಸಜ್ಜಿತ ನಕ್ಸಲರ ಗುಂಪು ಆತನನ್ನು ಪತ್ನಿಯ ಕಣ್ಣೆದುರೇ ಕೊಚ್ಚಿದ್ದು, ನಕ್ಸಲ್ ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳ ದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿ ಪರಾರಿಯಾಗಿದೆ ಎಂದು ಅಧಿಕಾರಿ ತಿಳಿಸಿದರು.
ಹಂತಕರನ್ನು ಗುರುತಿಸಲಾಗಿದ್ದು, ಅವರ ಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯಾ ಚರಣೆ ನಡೆಯುತ್ತಿದೆ ಎಂದರು.







