ಒಆರ್‌ಒಪಿ: ಆತ್ಮಹತ್ಯೆ ಮಾಡಿಕೊಂಡ ಮಾಜಿಯೋಧನ ಪುತ್ರ ಆರ್‌ಪಿಐ ನಾಯಕ-ಕೇಂದ್ರ ಸಚಿವ ಅಠಾವಳೆ

ರೋಹ್ಟಕ್,ನ.6: ‘ಸಮಾನ ಶ್ರೇಣಿ ಸಮಾನ ಪಿಂಚಣಿ(ಒಆರ್‌ಒಪಿ)’ ವಿಷಯದಲ್ಲಿ ನೊಂದು ಭಿವಾನಿಯ ಮಾಜಿ ಯೋಧ ರಾಮಕಿಶನ್ ಗ್ರೆವಾಲ್ ಅವರ ಆತ್ಮಹತ್ಯೆ ಸುತ್ತಲಿನ ರಾಜಕೀಯ ಮುಂದುವರಿದಿದೆ.
ಗ್ರೆವಾಲ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಎಂಬ ಹೇಳಿಕೆಯ ಮೂಲಕ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಅವರು ಹುಟ್ಟು ಹಾಕಿರುವ ವಿವಾದ ಇನ್ನೂ ಹಸಿರಾಗಿರುವಾಗಲೇ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ ಅಠಾವಳೆ ಅವರು ಮಾಜಿಯೋಧನ ಪುತ್ರ ತನ್ನ ಆರ್‌ಪಿಐ ಪಕ್ಷದ ನಾಯಕನಾಗಿದ್ದಾರೆ ಎಂಬ ಇನ್ನೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಶನಿವಾರ ಗ್ರೆವಾಲ್ ಕುಟುಂಬಕ್ಕೆ ತನ್ನ ಸಂತಾಪಗಳನ್ನು ತಿಳಿಸಲೆಂದು ಭಿವಾನಿಯ ಬಾಮ್ಲಾ ಗ್ರಾಮದಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದ ಅಠಾವಳೆ ಸಿಂಗ್ ಅವರ ಹೇಳಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, ಗ್ರೆವಾಲ್‌ರ ಪುತ್ರ ಜಸ್ವಂತ್ ಆರ್‌ಪಿಐನ ಬ್ಲಾಕ್ ಮಟ್ಟದ ನಾಯಕರಾಗಿದ್ದಾರೆ ಎಂದು ಹೇಳಿದರು.
ಜಸ್ವಂತ್ ಆರ್‌ಪಿಐನ ಬ್ಲಾಕ್ ಅಧ್ಯಕ್ಷರಾಗಿದ್ದಾರೆ. ಗ್ರೆವಾಲ್ ಆತ್ಮಹತ್ಯೆ ನಮಗೆ ತೀವ್ರ ದುಃಖವನ್ನುಂಟು ಮಾಡಿದೆ. ಒಆರ್‌ಒಪಿ ಜಾರಿಯನ್ನು ಮೋದಿ ಸರಕಾರವು ಗಂಭೀರ ವಾಗಿ ಪರಿಗಣಿಸಿದೆ ಎಂದು ಅವರು ತಿಳಿಸಿದರು.
ಗ್ರೆವಾಲ್‌ರ ಮಕ್ಕಳ ಪೈಕಿ ಓರ್ವರಿಗೆ ಸರಕಾರಿ ಹುದ್ದೆಯ ಕೊಡುಗೆಯನ್ನು ಮುಂದಿಟ್ಟ ಅವರು, ರಾಜ್ಯ ಸರಕಾರದ ಜೊತೆಗೆ ತನ್ನ ಇಲಾಖೆಯೂ ಮಾಜಿಯೋಧನ ಪುತ್ರರಲ್ಲೋರ್ವನಿಗೆ ಉದ್ಯೋಗವನ್ನು ನೀಡಲಿದೆ ಎಂದರು.
‘ಹುತಾತ್ಮರಿಗೆ ’ಪರಿಹಾರದ ತನ್ನ ನೀತಿಯಡಿ ದಿಲ್ಲಿ ಸರಕಾರವೂ ಗ್ರೆವಾಲ್ ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ನೌಕರಿಯನ್ನು ನೀಡುವುದಾಗಿ ಪ್ರಕಟಿಸಿದೆ.





