ಟಿಪ್ಪುಜಯಂತಿ ಆಚರಣೆ ತಪ್ಪಲ್ಲ : ಜಸ್ಟಿಸ್ ವೆಂಕಟಾಚಲಯ್ಯ

ಕಾಪು, ನ.6: ಟಿಪ್ಪು ಜಯಂತಿ ಆಚರಣೆಯಲ್ಲಿ ತಪ್ಪಿಲ್ಲ. ಆಚರಣೆ ಮಾಡದೇ ಇದ್ದಲ್ಲಿ ನಷ್ಟವೂ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ವೆಂಕಟಾಚಲಯ್ಯ ಹೇಳಿದರು.
ಅವರು ಶ್ರೀ ಮಧ್ವವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ಬಂಟಕಲ್ಲು ಇದರ ಪದವಿ ಪ್ರಧಾನ ಸಮಾರಂದಲ್ಲಿ ರವಿವಾರ ಬಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಟಿಪ್ಪು ಸುಲ್ತಾನ್ ಬ್ರಿಟಿಷರನ್ನು ಸದೆಬಡಿಯಲು ಬೇರೆ ರಾಷ್ಟ್ರಗಳ ಸಹಾಯವನ್ನೂ ಕೇಳಿದ್ದ ಎಂಬುದನ್ನು ಇತಿಹಾಸ ಹೇಳುತ್ತದೆ. ಬ್ರಿಟಿಷರನ್ನು ನಮ್ಮನೆಲದಿಂದ ಹೊರದಬ್ಬುವುದೂ ಸ್ವಾತಂತ್ರ್ಯದ ಭಾಗವಾಗಿತ್ತು. ರಾಜ್ಯದಲ್ಲಿ ಟಿಪ್ಪು ಜಯಂತಿ ಪರ ಮತ್ತು ವಿರೋಧ ಭುಗಿಲೆದಿದ್ದು, ಇದು ಬೇಕಾ? ಬೇಡವಾ ಎಂಬುದನ್ನು ಜನಾಭಿಪ್ರಾಯಕ್ಕೆ ಬಿಡಬೇಕು ಎಂದರು.
ಭೋಪಾಲ್ ಎನ್‌ಕೌಂಟರ್‌ನ ತನಿಖೆ ಅವಶ್ಯ
ಯಾವುದೇ ವ್ಯಕ್ತಿ ಅನೈಸರ್ಗಿಕವಾಗಿ ಸಾವು ಹೊಂದಿದಲ್ಲಿ ತನಿಖೆಯಾಗಲೇ ಬೇಕು ಎಂದು ಕಾನೂನು ಹೇಳುತ್ತದೆ. ಮಾನವ ಹತ್ಯೆಯ ಅಧಿಕಾರ ಯಾರಿಗೂ ಇಲ್ಲ. ಸಿಮಿ ಶಂಕಿತ ಉಗ್ರರ ಎನ್‌ಕೌಂಟರ್ ಕೂಡಾ ತನಿಖೆಯಾಗಬೇಕು. ಈ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಜಸ್ಟಿಸ್ ಕಾಟ್ಜುರವರ ಹೇಳಿಕೆಗೆ ನಾನು ಯಾವುದೇ ಅಭಿಪ್ರಾಯ ಹೇಳುವುದಿಲ್ಲ. ಯಾಕೆಂದರೆ ಅವರು ಯಾವುದೇ ವಿಷಯ ಪ್ರಸ್ತಾಪಿಸಿದ ಬಳಿಕ ಆಲೋಚಿಸುತ್ತಾರೆ ಎಂದರು.
ಮಾಧ್ಯಮ ದಿಗ್ಭಂಧನ ಕಾರಣ ಬೇಕು
ಯಾವುದೇ ಬಲವಾದ ಕಾರಣವಿಲ್ಲದೆ ಯಾವುದೇ ಚಾನೆಲ್ ಅಥವಾ ಸುದ್ದಿ ಮಾಧ್ಯಮವನ್ನು ನಿಷೇಧಿಸುವುದು ಸರಿಯಲ್ಲ. ಸಕಾರಣವಿದ್ದಲ್ಲಿ ನಿಷೇಧಿಸುವುದರಲ್ಲಿ ತಪ್ಪೂಇಲ್ಲ ಎಂದರು.
ಕಂಪ್ಯೂಟರ್ ಅಸೋಸಿಯೇಟ್ಸ್ ಬೆಂಗಳೂರು ಇದರ ಉಪಾಧ್ಯಕ್ಷ ಅನಿಲ್ ನಾಗೇಂದ್ರ, ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ರತ್ನಕುಮಾರ್, ನ್ಯಾಯವಾದಿ ಮಟ್ಟಿ ರಾಮಚಂದ್ರರಾವ್, ಶ್ರೀನಿವಾಸ ತಂತ್ರಿ ಈ ಸಂದರ್ಭ ಉಪಸ್ಥಿತರಿದ್ದರು.







