2000 ರೂಪಾಯಿ ಹೊಸ ನೋಟಿನ ಚಿತ್ರ ಲೀಕ್?

ಹೊಸದಿಲ್ಲಿ,ನ.6: ಭಾರತೀಯ ರಿಸರ್ವ್ ಬ್ಯಾಂಕ್ ತರಲು ಉದ್ದೇಶಿಸಿರುವ 2000 ರೂಪಾಯಿಯ ನೋಟಿನ ಚಿತ್ರ ಎನ್ನಲಾದ ಸರಣಿ ಚಿತ್ರಗಳು ಇದೀಗ ಟ್ವಿಟ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. ಬಂಡಲ್‌ಗಟ್ಟಲೆ, ನಸುಗೆಂಪು ಹಾಗೂ ಬಿಳಿ ಬಣ್ಣದ ನೋಟುಗಳ ಚಿತ್ರಗಳು ಹರಿದಾಡುತ್ತಿವೆ.
ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಸದ್ಯದಲ್ಲೇ ಪ್ರಸಾರಕ್ಕೆ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಈ ಅಧಿಕ ಮೌಲ್ಯದ ನೋಟುಗಳನ್ನು ದೇಶದ ವಿತ್ತ ಮಾರುಕಟ್ಟೆಯಲ್ಲಿ ಪರಿಚಯಿಸಲು ಆರ್‌ಬಿಐ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಆದರೆ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುವ ನೋಟುಗಳು ಅಸಲಿಯೇ ಅಥವಾ ನಕಲಿಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಮೈಸೂರಿನ ನೋಟು ಮುದ್ರಣಾಲಯದಲ್ಲಿ ಈಗಾಗಲೇ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿದ್ದು, ಈಗಾಗಲೇ ವಿವಿಧೆಡೆಗೆ ಕಳುಹಿಸಲಾಗಿದೆ ಎಂದು ಹಿಂದೂ- ಬ್ಯುಸಿನೆಸ್ ಲೈನ್‌ನಲ್ಲಿ ಅಕ್ಟೋಬರ್ 21ರಂದು ವರದಿ ಪ್ರಕಟವಾಗಿತ್ತು. ಆದರೆ ಈ ಬಗ್ಗೆ ಆರ್‌ಬಿಐ ಅಥವಾ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಮುನ್ನ ಆರ್‌ಬಿಐ ಮುದ್ರಿಸಿದ ಅತಿಹೆಚ್ಚು ಮೌಲ್ಯದ ನೋಟು ಎಂದರೆ 1938ರಲ್ಲಿ ಮತ್ತು 1954ರಲ್ಲಿ ಮುದ್ರಿಸಿದ್ದ 10 ಸಾವಿರ ರೂಪಾಯಿಯ ನೋಟು. ಇದೀಗ ಚಲಾವಣೆಯಲ್ಲಿರುವ ಗರಿಷ್ಠ ಮೌಲ್ಯದ ನೋಟು ಎಂದರೆ 1000 ರೂಪಾಯಿಯದ್ದು. ಅಧಿಕ ಮೌಲ್ಯದ ನೋಟುಗಳಿಗೆ ಬೇಡಿಕೆ ಇದ್ದರೂ, ಕಪ್ಪುಹಣಕ್ಕೆ ಕಡಿವಾಣ ಹಾಕುವ ಸಲುವಾಗಿ ಅಧಿಕ ಮೌಲ್ಯದ ನೋಟುಗಳನ್ನು ಮುದ್ರಿಸಲು ಆರ್‌ಬಿಐ ಆಸಕ್ತಿ ತೋರಿರಲಿಲ್ಲ. ಇದೀಗ 2000 ರೂಪಾಯಿಯ ನೋಟು ಚಲಾವಣೆಗೆ ಬರುತ್ತಿದೆಯೇ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಭಾರಿ ಕುತೂಹಲ ಮೂಡಿದೆ.
Reserve Bank #RBI to issue Rs 2000 currency note in India soon pic.twitter.com/sTOMR5Um6I
— Sanjeev Kamboj (@kambojOffice) November 6, 2016







