ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ 26.80 ಕೋಟಿ ರೂ. ಅನುದಾನ: ಸಚಿವ ರೈ

ಬಂಟ್ವಾಳ, ನ.6: ಕೇಂದ್ರ ರಸ್ತೆ ಅಭಿವೃದ್ಧಿ ನಿಧಿ ಯೋಜನೆಯಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 26.80 ಕೋಟಿ ರೂ. ಅನುದಾನ ಮಂಜೂರಾಗಿದ್ದು ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ವಗ್ಗದ ಪಚ್ಚಾಜೆ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಬಿ.ಸಿ.ರೋಡ್ ಜಂಕ್ಷನ್‌ನಿಂದ ಗೂಡಿನಬಳಿ ಪಾಣೆಮಂಗಳೂರು ವರೆಗೆ ಹಾಗೂ ನಂದಾವರ ಪೇಟೆಯ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ 3.50 ಕೋಟಿ ರೂ., ರಾಯಿ-ಮೂರ್ಜೆ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ. 12:50ರಿಂದ 15ರವರೆಗೆ ಅಭಿವೃದ್ಧಿಗಾಗಿ 1.80 ಕೋಟಿ ರೂ., ಮೂಡುಬಿದಿರೆ-ಬಂಟ್ವಾಳ ಜಿಲ್ಲಾ ಮುಖ್ಯ ರಸ್ತೆಯ ಬಂಟ್ವಾಳದಿಂದ ಸೊರ್ನಾಡುವರೆಗಿನ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ., ಅಣ್ಣಳಿಕೆ-ಕರಿಮಲೆ ರಸ್ತೆಯ 9.50 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ., ಗೋಳ್ತಮಜಲು-ಮಂಚಿ ರಸ್ತೆ ಉಳಿಕೆ ಭಾಗದ ಅಭಿವೃದ್ಧಿಗೆ 2 ಕೋಟಿ ರೂ., ವಗ್ಗ ಕಾರಿಂಜೇಶ್ವರ ದೇವಸ್ಥಾನ ರಸ್ತೆ ಮತ್ತು ಮಣಿನಾಲ್ಕೂರಿನಿಂದ ಉಳಿವರೆಗಿನ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ., ಕೊಳ್ನಾಡು ಗ್ರಾಮದ ನೆಕ್ಕರೆಕಾಡು ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ., ವಗ್ಗ ವಾಮದಪದವು ರಸ್ತೆ ಅಭಿವೃದ್ಧಿಗೆ 2.50 ಕೋಟಿ ರೂ. ಅನುದಾನ ಬಿಡುಗಡೆಗೊಂಡಿರುವುದಾಗಿ ಅವರು ತಿಳಿಸಿದರು.
ಬಂಟ್ವಾಳ ವಿಧಾನಸಬಾ ಕ್ಷೇತ್ರದ ಪಿಡಬ್ಲ್ಯೂಡಿ ರಸ್ತೆಗಳೆಲ್ಲವೂ ಡಾಮರೀಕರಣಗೊಂಡಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಸಿಗುವ 20 ಕೋಟಿ ರೂ. ಅನುದಾನವನ್ನು ಈ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಯೋಜನಾ ಪ್ರಾದಿಕಾರದ ನಿಕಟಪೂರ್ವಾಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಹಾಜರಿದ್ದರು.







