ಗ್ಯಾಸ್ ಚೇಂಬರ್‌ನಂತಾದ ದಿಲ್ಲಿ : ಶಾಲೆಗಳಿಗೆ 3 ದಿನ ರಜೆ

ಹೊಸದಿಲ್ಲಿ, ನ.6: ದಿಲ್ಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿಮೀರಿದ್ದು ಬುಧವಾರದ ವರೆಗೆ ನಗರದ ಎಲ್ಲಾ ಶಾಲೆಗಳಿಗೆ ರಜೆ ಸಾರಲಾಗಿದೆ. ಪರಿಸ್ಥಿತಿಯ ನಿಯಂತ್ರಣಕ್ಕೆ ಬದಾರ್‌ಪುರ ವಿದ್ಯುತ್ ಸ್ಥಾವರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ನಿರ್ಮಾಣ ಮತ್ತು ಕೆಡವುವ ಕಾರ್ಯಕ್ಕೆ ಮುಂದಿನ ಐದು ದಿನದ ವರೆಗೆ ನಿಷೇಧ ಹೇರುವುದೂ ಸೇರಿದಂತೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ತಿಳಿಸಿದ್ದಾರೆ.
ಪಂಜಾಬ್ ಮತ್ತು ಹರ್ಯಾನಾದಲ್ಲಿ ರೈತರು ದೀಪಾವಳಿಯ ಬಳಿಕ ಭತ್ತದ ಬೆಳೆಯ ತ್ಯಾಜ್ಯಗಳನ್ನು ಸುಡಲು ಆರಂಭಿಸುತ್ತಾರೆ. ಇದೇ ವೇಳೆ ಪಶ್ಚಿಮದಿಂದ ಪೂರ್ವಕ್ಕೆ ಗಾಳಿ ಬೀಸಲಾರಂಭಿಸುತ್ತದೆ. ಆಗ ಕೃಷಿ ತ್ಯಾಜ್ಯದ ಹೊಗೆ ದಿಲ್ಲಿಯತ್ತ ಬೀಸಿ ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ‘ಗ್ಯಾಸ್ ಚೇಂಬರ್’ನಂತಾಗಿರುವ ದಿಲ್ಲಿ ನಗರಕ್ಕೆ ಮೋಡ ಬಿತ್ತನೆಯ ಮೂಲಕ ಕೃತಕ ಮಳೆ ಸುರಿಸುವ ಕುರಿತು ಸಚಿವ ಸಂಪುಟದ ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದ್ದು , ಇದರ ಸಾಧ್ಯತೆ ಮತ್ತು ಪರಿಣಾಮದ ಬಗ್ಗೆ ಕೇಂದ್ರ ಸರ್ಕಾರದೊಡನೆ ಮಾತುಕತೆ ನಡೆಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಪರಿಸರ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ ಎಂದು ಕೇಜ್ರೀವಾಲ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯು ನಾಳೆ ಬೆಳಿಗ್ಗೆ ಪ್ರಥಮ ಮಾಲಿನ್ಯ ಸಲಹೆಯನ್ನು ನೀಡಲಿದೆ. ಸಾಧ್ಯವಿದ್ದರೆ ಮನೆಯಿಂದಲೇ ತಮ್ಮ ಕೆಲಸ ಕಾರ್ಯ ನಿರ್ವಹಿಸುವಂತೆ ಜನರಿಗೆ ಮನವಿ ಮಾಡಿದ್ದೇವೆ. ವಾಹನ ಸವಾರರಿಗೆ ಸಮ-ಬೆಸ ಸಂಖ್ಯೆಯ ನಿಯಮವನ್ನು ಜಾರಿಗೆ ತರುವ ಬಗ್ಗೆಯೂ ಸಿದ್ಧತೆ ಆರಂಭಿಸಲಾಗಿದ್ದು ಮುಂದಿನ ಕೆಲ ದಿನಗಳಲ್ಲಿ ಅಗತ್ಯ ಬಿದ್ದರೆ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಕಲ್ಲಿದ್ದಲು ಆಧರಿತ ಬದಾರ್‌ಪುರ ಉಷ್ಣ ವಿದ್ಯುತ್ ಸ್ಥಾವರ ದಿಲ್ಲಿಯ ವಾಯುಮಾಲಿನ್ಯಕ್ಕೆ ಒಂದು ಪ್ರಧಾನ ಕಾರಣವಾಗಿದ್ದು ಅದನ್ನು ಮುಂದಿನ ಹತ್ತು ದಿನಗಳವರೆಗೆ ಮುಚ್ಚಲಾಗುವುದು . ನಾಳೆಯಿಂದ ರಸ್ತೆಗೆ ನೀರು ಚಿಮುಕಿಸಲಾಗುವುದು ಮತ್ತು ಕಸ ಕಡ್ಡಿ, ತ್ಯಾಜ್ಯಗಳನ್ನು ಸುಡುವುದನ್ನು ನಿಷೇಧಿಸಲಾಗಿದೆ . ಕಸ ಸುಟ್ಟ ಮಾಹಿತಿ ಬಂದರೆ ಸ್ಥಳೀಯ ನೈರ್ಮಲ್ಯ ಪರೀಕ್ಷಕರನ್ನು ಹೊಣೆಯಾಗಿಸಲಾಗುತ್ತದೆ. 100 ಅಡಿಗಿಂತ ಅಗಲವಾಗಿರುವ ಪಿಡಬ್ಯೂಡಿ ರಸೆಗಳನ್ನು ನವೆಂಬರ್ 10ರ ಬಳಿಕ ನಿರ್ವಾತ ಮಾರ್ಜಕ(ವ್ಯಾಕ್ಯೂಂ ಕ್ಲೀನರ್)ಗಳ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸಲಾಗುವುದು. ತರಗೆಲೆಗಳನ್ನು ಸುಡುವ ಕುರಿತು ಒಂದು ಆ್ಯಪ್ ಅನ್ನು ನಾಳೆ ಬಿಡುಗಡೆಗೊಳಿಸಲಾಗುವುದು ಎಂದವರು ತಿಳಿಸಿದರು.
ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮತ್ತು ಮೊಬೈಲ್ ಟವರ್‌ಗಳಲ್ಲಿ ಬಳಸಲಾಗುವ ಡೀಸೆಲ್ ಜನರೇಟರ್‌ಗಳನ್ನು ಹೊರತುಪಡಿಸಿ, ಉಳಿದಂತೆ ಇವುಗಳ ಬಳಕೆಯನ್ನು ಮುಂದಿನ ಹತ್ತು ದಿನ ನಿಷೇಧಿಸಲಾಗಿದೆ.
ಕೇಂದ್ರ ಪರಿಸರ ಸಚಿವ ಅನಿಲ್ ದವೆಯವರನ್ನು ಶನಿವಾರ ಭೇಟಿಯಾಗಿದ್ದ ಕೇಜ್ರೀವಾಲ್, ದಿಲ್ಲಿಯಲ್ಲಿ ಅಪಾಯ ಮಟ್ಟ ತಲುಪಿರುವ ವಾಯುಮಾಲಿನ್ಯದ ಬಗ್ಗೆ ಅವರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ದವೆ ಸೋಮವಾರ ದಿಲ್ಲಿ ಮತ್ತು ಅದರ ನೆರೆಕರೆಯ ರಾಜ್ಯಗಳ ಪರಿಸರ ಇಲಾಖೆಯ ಸಚಿವರ ತುರ್ತು ಸಭೆ ಕರೆದಿದ್ಧಾರೆ.
ಜನರ ಪ್ರತಿಭಟನೆ: ರಾಷ್ಟ್ರದ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದನ್ನು ವಿರೋಧಿಸಿ ಮತ್ತು ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ಬಗ್ಗೆ ಸರಕಾರದ ತುರ್ತು ಕ್ರಮಕ್ಕೆ ಆಗ್ರಹಿಸಿ ಮಕ್ಕಳೂ ಸೇರಿದಂತೆ ನೂರಾರು ಜನರು ಜಂತರ್‌ಮಂತರ್ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಟಿ ನಫೀಸಾ ಅಲಿ, ದಿಲ್ಲಿ ಸರಕಾರ ಈ ಹಿಂದೆ ಕೈಗೊಂಡಿದ್ದ ಸಮ-ಬೆಸ ನಿಯಮ ವಾಯುಮಾಲಿನ್ಯ ಕಡಿಮೆಗೊಳಿಸಲು ಒಂದು ಸೂಕ್ತ ಕ್ರಮವಾಗಿದೆ. ಸಾಧ್ಯವಿದ್ದರೆ ಇದನ್ನು ಮತ್ತೊಮ್ಮೆ ಜಾರಿಗೊಳಿಸಬೇಕು ಎಂದು ಹೇಳಿದರು.
ಗಾಳಿ ಮುಖವಾಡಗಳಿಗೆ ಹೆಚ್ಚಿದ ಬೇಡಿಕೆ:
ಕಳೆದ 17 ವರ್ಷಗಳಲ್ಲೇ ಅತ್ಯಂತ ಕೆಟ್ಟ ಹವಾಮಾನ ಪರಿಸ್ಥಿತಿಗೆ ಸಾಕ್ಷಿಯಾದ ದಿಲ್ಲಿಯಲ್ಲಿ ಗಾಳಿ ಮುಖವಾಡಗಳಿಗೆ ಬೇಡಿಕೆ ಹೆಚ್ಚಿದ್ದು ಇವುಗಳನ್ನು ಮಾರಾಟ ಮಾಡುವ ಮಳಿಗೆಗಳಲ್ಲಿ ‘ ನೋ ಸ್ಟಾಕ್’ ಬೋರ್ಡ್ ಕಾಣಿಸಿಕೊಂಡಿದೆ. ಕೆಲವು ಶಾಲೆ ಕಾಲೇಜುಗಳು ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸುವಂತೆ ಸೂಚಿಸಿವೆ. ಇಂದು ಮಧ್ಯಾಹ್ನದ ವೇಳೆಗಾಗಲೇ ನಮ್ಮ ಮಳಿಗೆಗಳಲ್ಲಿ ಮಾಸ್ಕ್‌ಗಳ ದಾಸ್ತಾನು ಮುಗಿದಿವೆ. ಸಾಮಾನ್ಯವಾಗಿ ದೀಪಾವಳಿ ಸಂದರ್ಭ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ ಈ ಬಾರಿ ಹತ್ತು ಪಟ್ಟು ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಮಾಸ್ಕ್ ತಯಾರಿಕಾ ಸಂಸ್ಥೆಯೊಂದರ ಮಾಲಿಕ ಜೈಧಾರ್ ಗುಪ್ತ. ಗುಣಮಟ್ಟದ ಆಧಾರದಲ್ಲಿ ಮಾಸ್ಕ್‌ಗಳಿಗೆ 90 ರೂ.ಯಿಂದ 2200 ರೂ.ವರೆಗೆ ದರವಿದ್ದು ಇದೀಗ ಆನ್‌ಲೈನ್‌ನಲ್ಲೂ ಬೇಡಿಕೆ ಸಲ್ಲಿಸುವವರ ಸಂಖ್ಯೆ ಹೆಚ್ಚಿದೆ.







