''ಇಂದಿರಾ ಗತಿ ಮೋದಿಗೆ" ವಿವಾದ: ಮಟ್ಟು ಹೇಳಿದ್ದೇನು?
ಬೆಂಗಳೂರು, ನ.6: ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಕೊನೆಗೆ ಆದ ಗತಿಯೇ ಹಾಲಿ ಪ್ರಧಾನಿ ನರೇಂದ್ರ ಮೋದಿಗೂ ಆಗಬೇಕಾ ಎಂದು ಸಿಎಂ ಮಾಧ್ಯಮ ಸಲಹೆಗಾರ ಅಮೀನ್ ಮಟ್ಟು ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಹಾಗೂ ಆರೆಸ್ಸೆಸ್ ಮುಖಂಡರುಗಳು ಟ್ವೀಟ್ ಮೂಲಕವೇ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರಿಗೆ ಮಟ್ಟು ಅವರನ್ನು ಶೀಘ್ರವಾಗಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ದಿನೇಶ್ ಅಮೀನ್ ಮಟ್ಟು ಅವರನ್ನು ಬಂಧಿಸದಿದ್ದರೇ ಅವರ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಮುಖಂಡರು ಹೋರಾಟ ನಡೆಸುತ್ತಾರೆ ಎಂದು ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ಆರೆಸ್ಸೆಸ್ ಮುಖಂಡರೂ ಮಟ್ಟು ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ದಿನೇಶ್ ಅಮೀನ್ ಮಟ್ಟು ಅವರ ಪ್ರತಿಕ್ರಿಯೆ ಹೀಗಿದೆ.
''ಎನ್ ಡಿಟಿವಿ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದನ್ನು ವಿರೋಧಿಸಿ ನಾನೊಂದು ಪೋಸ್ಟ್ ಹಾಕಿದ್ದೆ. ಅದರ ಬಗ್ಗೆ ನಡೆದ ಚರ್ಚೆಯಲ್ಲಿ ವೆಂಕಟೇಶ್ ಲಕ್ಕನಗೌಡರ್ ಎಂಬ ವ್ಯಕ್ತಿ ಪ್ರತಿಕ್ರಿಯಿಸಿ ''ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದು ಮರೆತು ಬಿಟ್ರಾ ಹೇಗೆ?' ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ನಾನು 'ಇಂದಿರಾಗಾಂಧಿಗೆ ಕೊನೆಗೆ ಏನಾಯಿತು ಗೊತ್ತಲ್ಲ? ಅದೇ ನಿಮ್ಮ ಮೋದಿಯವರಿಗೂ.ಆಗಬೇಕೆಂದು ನಿಮ್ಮ.ಆಸೆಯೇ? ಎಂದು ಕೇಳಿದ್ದೆ. ಈ ಪ್ರತಿಕ್ರಿಯೆಯ.ಆಯ್ದ ಭಾಗವನ್ನಷ್ಟೇ ಕತ್ತರಿಸಿ ಅದಕ್ಕೆ ಕಲ್ಪಿತ ವ್ಯಾಖ್ಯಾನಗಳನ್ನು ಸೇರಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಕಂಟಕಪ್ರಿಯರಿಗೆ.ಅವರು ನಂಬಿರುವ ದೇವರು ಸದ್ಬುದ್ದಿ ಕರುಣಿಸಲಿ ಎಂದು ಹಾರೈಸುತ್ತೇನೆ.