ಬಾಂಗ್ಲಾ ವೇಗಿ ಶಹಾದತ್ ಹುಸೈನ್ ದೋಷಮುಕ್ತ
ಮನೆಕೆಲಸದಾಕೆಗೆ ಕಿರುಕುಳ ಪ್ರಕರಣ

ಢಾಕಾ, ನ.6: ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ 11ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಲುಕಿದ್ದ ಬಾಂಗ್ಲಾದೇಶದ ವೇಗದ ಬೌಲರ್ ಶಹಾದತ್ ಹುಸೈನ್ ಹಾಗೂ ಅವರ ಪತ್ನಿಗೆ ಬಾಂಗ್ಲಾದೇಶ ನ್ಯಾಯಾಲಯ ರವಿವಾರ ದೋಷ ಮುಕ್ತಗೊಳಿಸಿದೆ.
ಪ್ರಾಸಿಕ್ಯೂನ್ ಹುಸೈನ್ ದಂಪತಿ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿರುವ ಕಾರಣ ಇಬ್ಬರನ್ನು ದೋಷ ಮುಕ್ತಗೊಳಿಸಿದೆ ಎಂದು ಮಕ್ಕಳ ಹಾಗೂ ಮಹಿಳೆಯರ ದೌರ್ಬನ್ಯ ತಡೆ ನ್ಯಾಯಾಧೀಕರಣದ ಪ್ರಾಸಿಕ್ಯೂಟರ್ ಅಲಿ ಅಸ್ಗರ್ ತಿಳಿಸಿದ್ದಾರೆ.
ಕಳೆದ ವರ್ಷ ಶಹಾದತ್ ಹುಸೈನ್ ಹಾಗೂ ಅವರ ಪತ್ನಿ ನ್ರಿಟ್ಟೊ ಶಹಾದತ್ ವಿರುದ್ಧ ಮನೆ ಕೆಲಸಕ್ಕಿದ್ದ ಬಾಲಕಿಗೆ ಕಿರುಕುಳ ನೀಡಿದ್ದ ಪ್ರಕರಣ ದಾಖಲಾಗಿತ್ತು. ಬಾಲಕಿಯು ಹುಸೈನ್ ಮನೆಯಿಂದ ತಪ್ಪಿಸಿಕೊಂಡು ರಸ್ತೆ ಬದಿ ಅಳುತ್ತಾ ನಿಂತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಹುಸೈನ್ ದಂಪತಿ ತನಗೆ ಮಾನಸಿಕ ಕಿರುಕುಳ ನೀಡಿದ್ದಾರೆಂದು ಬಾಲಕಿ ದೂರು ನೀಡಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದ ಹುಸೈನ್ ಎರಡು ತಿಂಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು. ಹುಸೈನ್ ಪತ್ನಿಯನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಹುಸೈನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹುಸೈನ್‌ಗೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧ ಹೇರಿತ್ತು. ಕಳೆದ ಮೇನಲ್ಲಿ ಹುಸೈನ್‌ಗೆ ಮಾನವೀಯ ದೃಷ್ಟಿಯಿಂದ ಪ್ರಕರಣ ಇತ್ಯರ್ಥವಾಗುವ ತನಕ ದೇಶಿಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಲಾಗಿತ್ತು. ಹುಸೈನ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದ್ದರು.
ಹುಸೈನ್ ನಿಷೇಧಕ್ಕೆ ಗುರಿಯಾಗುವ ಮೊದಲು ಬಾಂಗ್ಲಾದೇಶದ ಪರ 38 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 72 ವಿಕೆಟ್ ಉರುಳಿಸಿದ್ದರು. 51 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 47 ವಿಕೆಟ್ ಕಬಳಿಸಿದ್ದರುಲ
‘‘ಕೊನೆಗೂ ಸತ್ಯಕ್ಕೆ ಜಯ ಲಭಿಸಿದೆ. ನನಗೆ ದೇಶದ ಪರ ಇನ್ನಷ್ಟು ಆಡಬೇಕೆಂಬ ಬಯಕೆಯಿದೆ’’ ಎಂದು ಕೋರ್ಟ್ ತೀರ್ಪಿನ ಬಳಿಕ ಹುಸೈನ್ ಪ್ರತಿಕ್ರಿಯಿಸಿದರು.







