ಪರ್ತ್ ಟೆಸ್ಟ್: ಸೋಲಿನ ಸುಳಿಯಲ್ಲಿ ಆಸ್ಟ್ರೇಲಿಯ

ಪರ್ತ್, ನ.6: ಆತಿಥೇಯ ಆಸ್ಟ್ರೇಲಿಯ ತಂಡ ಸುಮಾರು 28 ವರ್ಷಗಳ ಬಳಿಕ ಋತುವಿನ ಆರಂಭಿಕ ಟೆಸ್ಟ್ ಪಂದ್ಯವನ್ನು ಸೋಲುವ ಭೀತಿಯಲ್ಲಿದೆ. ರವಿವಾರ ಇಲ್ಲಿನ ವಾಕಾ ಪಿಚ್‌ನಲ್ಲಿ ದಕ್ಷಿಣ ಆಫ್ರಿಕ ತಂಡ ಆಸ್ಟ್ರೇಲಿಯದ ಗೆಲುವಿಗೆ 539 ರನ್ ಕಠಿಣ ಗುರಿ ನೀಡಿದೆ.
ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ 169 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಉಸ್ಮಾನ್ ಖ್ವಾಜಾ(ಅಜೇಯ 58) ಹಾಗೂ ಮಿಚೆಲ್ ಮಾರ್ಷ್(ಅಜೇಯ 15) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕೊನೆಯ ದಿನವಾದ ಸೋಮವಾರ ಆಸ್ಟ್ರೇಲಿಯ ತಂಡ 90 ಓವರ್‌ಗಳಲ್ಲಿ ಇನ್ನೂ 370 ರನ್ ಗಳಿಸಬೇಕಾದ ಅಗತ್ಯವಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಂತಿಮ ದಿನದಾಟದಲ್ಲಿ ಎದುರಾಗಿರುವ ಕಠಿಣ ಸವಾಲಾಗಿದೆ.
ಸ್ಟಾರ್ ವೇಗದ ಬೌಲರ್ ಡೇಲ್ ಸ್ಟೇಯ್ನಾ ಅನುಪಸ್ಥಿತಿಯಲ್ಲಿ ಆಫ್ರಿಕದ ವೇಗದ ದಾಳಿಯ ನೇತೃತ್ವವನ್ನು ವಹಿಸಿದ್ದ ಕಾಗಿಸೊ ರಬಾಡ ಎದುರಾಳಿ ತಂಡದ ನಾಯಕ ನಾಯಕ ಸ್ಟೀವ್ ಸ್ಮಿತ್(34) ಸಹಿತ 49 ರನ್‌ಗೆ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯ 52 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು.
ಆಗ 3ನೆ ವಿಕೆಟ್‌ಗೆ 92 ರನ್ ಜೊತೆಯಾಟ ನಡೆಸಿದ ಸ್ಮಿತ್ ಹಾಗೂ ಖ್ವಾಜಾ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ, ರಬಾಡ ಅವರು ಸ್ಮಿತ್ ಹಾಗೂ ಖ್ವಾಜಾ ನಡುವಿನ ಜೊತೆಯಾಟ ಮುರಿದಿದ್ದಾರೆ.
ಆಫ್ರಿಕ ವಿರುದ್ಧ ಸೋತರೆ ಆಸೀಸ್ ತೀವ್ರ ಮುಜುಗರ ಎದುರಿಸಲಿದೆ. 1988ರಲ್ಲಿ ಗಾಬಾದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಬಾರಿ ಆಸೀಸ್ ಸೋತಿತ್ತು. ಆ ಬಳಿಕ ಈ ಸ್ಟೇಡಿಯಂನಲ್ಲಿ ಆತಿಥೇಯರು ಸೋಲನ್ನೇ ಕಂಡಿಲ್ಲ.
ದಕ್ಷಿಣ ಆಫ್ರಿಕ ತಂಡ ಎರಡನೆ ಇನಿಂಗ್ಸ್‌ನ್ನು 8 ವಿಕೆಟ್ ನಷ್ಟಕ್ಕೆ 540 ರನ್‌ಗೆ ಡಿಕ್ಲೇರ್ ಮಾಡಿತು. ಆಸ್ಟ್ರೇಲಿಯಕ್ಕೆ ಕನಿಷ್ಠ 143 ಓವರ್‌ಗಳಲ್ಲಿ 539 ರನ್ ಗಳಿಸುವ ಕಠಿಣ ಸವಾಲು ನಿಗದಿಪಡಿಸಿತು. ಆಸ್ಟ್ರೇಲಿಯ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಬೇಕಾದರೆ ನಾಲ್ಕನೆ ಇನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಬೇಕಾಗಿದೆ.
ವೆಸ್ಟ್‌ಇಂಡೀಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಚೇಸಿಂಗ್ ಮಾಡಿರುವ ದಾಖಲೆ ಹೊಂದಿದೆ. 2003ರ ಮೇನಲ್ಲಿ ಆ್ಯಂಟಿಗುವಾದಲ್ಲಿ ನಡೆದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 417 ರನ್ ಗುರಿ ಪಡೆದಿದ್ದ ಬ್ರಿಯಾನ್ ಲಾರಾ ನೇತೃತ್ವದ ವಿಂಡೀಸ್ ತಂಡ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿ 3 ವಿಕೆಟ್‌ಗಳ ಅಂತರದ ಜಯ ಸಾಧಿಸಿತ್ತು.
33 ಎಸೆತಗಳಲ್ಲಿ 6 ಬೌಂಡರಿಯ ನೆರವಿನಿಂದ 35 ರನ್ ಗಳಿಸಿದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಆಸ್ಟ್ರೇಲಿಯ ವಿಕೆಟ್ ನಷ್ಟವಿಲ್ಲದೆ 52 ರನ್ ತಲುಪಲು ನೆರವಾಗಿದ್ದರು. ಆದರೆ, ವಾರ್ನರ್ ರನೌಟ್ ಆಗುವುದರೊಂದಿಗೆ ಆಸ್ಟ್ರೇಲಿಯ ಆರಂಭಿಕ ಆಘಾತ ಅನುಭವಿಸಿತು. ನಾಲ್ಕು ಎಸೆತಗಳ ಬಳಿಕ ಆರಂಭಿಕ ಆಟಗಾರ ಶಾನ್ ಮಾರ್ಷ್(15) ರಬಾಡ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ಎಫ್‌ಡು ಪ್ಲೆಸಿಸ್‌ಗೆ ಕ್ಯಾಚ್ ನೀಡಿದಾಗ ಆಸ್ಟ್ರೇಲಿಯದ ಸ್ಕೋರ್ 2 ವಿಕೆಟ್‌ಗೆ 52 ರನ್.
41 ರನ್‌ಗೆ ಜೀವದಾನ ಪಡೆದಿದ್ದ ಖ್ವಾಜಾ ಹಾಗೂ ಸ್ಮಿತ್ 3ನೆ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ದಕ್ಷಿಣ ಆಫ್ರಿಕ ತಂಡ 540/8 ಡಿಕ್ಲೇರ್: ಇದಕ್ಕೆ ಮೊದಲು 6 ವಿಕೆಟ್ ನಷ್ಟಕ್ಕೆ 390 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕ ತಂಡ ವೆರ್ನಾನ್ ಫಿಲ್ಯಾಂಡರ್ 73 ರನ್‌ಗೆ ಔಟಾದ ಬೆನ್ನಿಗೆ 8ಕ್ಕೆ 540 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ವಿಕೆಟ್‌ಕೀಪರ್ ಕ್ವಿಂಟನ್ ಡಿಕಾಕ್(64) ಹಾಗೂ ಫಿಲ್ಯಾಂಡರ್ 7ನೆ ವಿಕೆಟ್‌ಗೆ 116 ರನ್ ಜೊತೆಯಾಟ ನಡೆಸಿ ತಂಡ ಉತ್ತಮ ಸ್ಕೋರ್ ದಾಖಲಿಸಲು ನೆರವಾದರು. ಮೊದಲ ಇನಿಂಗ್ಸ್‌ನಲ್ಲಿ 84 ರನ್ ಗಳಿಸಿ ಆಫ್ರಿಕ ತಂಡ 242 ರನ್ ಗಳಿಸಲು ನೆರವಾಗಿದ್ದ ಡಿಕಾಕ್ ಮತ್ತೊಮ್ಮೆ ಬಾಲಂಗೋಚಿಗಳ ಬೆಂಬಲದಿಂದ ಆಫ್ರಿಕದ ಇನಿಂಗ್ಸ್ ಬೆಳೆಸಿ ಆಸ್ಟ್ರೇಲಿಯಕ್ಕೆ ತಲೆನೋವಾದರು.
28 ಹಾಗೂ 47 ರನ್ ಗಳಿಸಿದ್ದಾಗ ಎಲ್‌ಬಿಡಬ್ಲ್ಯು ಔಟ್ ತೀರ್ಪಿನಿಂದ ಬಚಾವಾಗಿದ್ದ ಡಿಕಾಕ್ ಎರಡೂವರೆ ಗಂಟೆಗಳ ಹೋರಾಟದಲ್ಲಿ 100 ಎಸೆತಗಳನ್ನು ಎದುರಿಸಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ ಮಿಚೆಲ್ ಮಾರ್ಷ್‌ಗೆ(2-77) ವಿಕೆಟ್ ಒಪ್ಪಿಸಿದರು.
ಮೂರು ಗಂಟೆಗಳ ಕಾಲ ಕ್ರೀಸ್‌ನಲ್ಲಿದ್ದ ಫಿಲ್ಯಾಂಡರ್ ಚೊಚ್ಚಲ ಪಂದ್ಯ ಆಡಿದ ಕೇಶವ್ ಮಹಾರಾಜ್‌ರೊಂದಿಗೆ(ಅಜೇಯ 41, 34 ಎಸೆತ, 2 ಬೌಂಡರಿ, 3 ಸಿಕ್ಸರ್)8ನೆ ವಿಕೆಟ್‌ಗೆ 72 ರನ್ ಸೇರಿಸಿದರು. 10 ಬೌಂಡರಿ, 2 ಸಿಕ್ಸರ್ ಬಾರಿಸಿ 73 ರನ್‌ಗೆ ಆಸೀಸ್ ನಾಯಕ ಸ್ಟೀವ್ ಸ್ಮಿತ್‌ಗೆ ವಿಕೆಟ್ ಒಪ್ಪಿಸಿದರು.
ಶನಿವಾರ ನಡೆದ 3ನೆ ದಿನದಾಟದಲ್ಲಿ 3ನೆ ವಿಕೆಟ್‌ಗೆ ಬರೋಬ್ಬರಿ 250 ರನ್ ಸೇರಿಸಿದ ಶತಕವೀರರಾದ ಎಲ್ಗರ್(127) ಹಾಗೂ ಜೀನ್‌ಪಾಲ್ ಡುಮಿನಿ(141) ಹರಿಣಪಡೆ 2ನೆ ಇನಿಂಗ್ಸ್‌ನಲ್ಲಿ ಉತ್ತಮ ಸ್ಕೋರ್ ದಾಖಲಿಸಲು ಅಡಿಪಾಯ ಹಾಕಿಕೊಟ್ಟಿದ್ದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ: ಪ್ರಥಮ ಇನಿಂಗ್ಸ್ 242 ರನ್
ದಕ್ಷಿಣ ಆಫ್ರಿಕ: ದ್ವಿತೀಯ ಇನಿಂಗ್ಸ್ 390/6
(ಜೆಪಿ ಡುಮಿನಿ 141, ಎಲ್ಗರ್ 127, ಫಿಲ್ಯಾಂಡರ್ 73, ಡಿಕಾಕ್ 64, ಹೇಝಲ್‌ವುಡ್ 2-107, ಸಿಡ್ಲ್ 2-62, ಮಾರ್ಷ್ 2-77)
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 70.2 ಓವರ್‌ಗಳಲ್ಲಿ 244
ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್: 55 ಓವರ್‌ಗಳಲ್ಲಿ 169/4
(ಉಸ್ಮಾನ್ ಖ್ವಾಜಾ ಅಜೇಯ 58, ವಾರ್ನರ್ 35, ಸ್ಮಿತ್ 34, ರಬಾಡ 3-49)







