ಜನಪರ ಯೋಜನೆ ಜಾರಿಗೆಯಲ್ಲಿ ಸಿಎಂ ಪ್ರಾಮಾಣಿಕ ಪ್ರಯತ್ನ: ವಿಜಯಕುಮಾರ್
ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆೆ
ಚಿಕ್ಕಮಗಳೂರು, ನ.6: ರಾಜ್ಯ ಸರಕಾರ ಕಳೆದ ಮೂರೂವರೆ ವರ್ಷಗಳಲ್ಲಿ ಸದೃಢ ಹಾಗೂ ಜನಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ನಾಯಕತ್ವದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ಕಚೆೇರಿಯಲ್ಲಿ ರವಿವಾರ ನಡೆದ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆೆಯಲ್ಲಿ ಮಾತನಾಡಿದರು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬರಲಿರುವುದರಿಂದ ಒಟ್ಟಾಗಿ ಪಕ್ಷವನ್ನು ಸಂಘಟಿಸಿ ಚುನಾವಣೆಗೆ ಸಿದ್ಧತೆ ಮಾಡಬೇಕೆಂದು ಹೇಳಿದರಲ್ಲದೆ, ಕಾಂಗ್ರೆಸ್ ಪಕ್ಷದ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಬಗ್ಗೆ ಜನ ಸಾಮಾನ್ಯರಿಗೆ ತಲುಪುವಂತೆ ಕಾರ್ಯಕರ್ತರು ಹಾಗೂ ಮುಖಂಡರು ಶ್ರಮ ವಹಿಸಬೇಕೆಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನೇಕರ ಹೆಸರು ಪ್ರಸ್ತಾಪವಾಗಿದ್ದು, ಈ ಬಗ್ಗೆ ಪರಿಶೀಲಿಸಿ ಪಕ್ಷನಿಷ್ಠೆ, ಪಕ್ಷದಲ್ಲಿ ಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ಅವರ ಆಸಕ್ತಿಯನ್ನು ಪರಿಗಣಿಸಿ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗುವುದೆಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಸ್. ಶಾಂತೇಗೌಡ ಮಾತನಾಡಿ, ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸರಕಾರ ಕಾರ್ಯಕ್ರಮಗಳನ್ನು ಪ್ರಚಾರಪಡಿಸಬೇಕು. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಈ ದಿನದಿಂದಲೇ ತಯಾರಿ ನಡೆಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಉರಾಳ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಳೆದ 7 ವರ್ಷಗಳಿಂದ ಪಕ್ಷದ ಅಧ್ಯಕ್ಷನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಮುಂದೆಯೂ ಸಹ ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ’ ಎಂದ ಅವರು, ಹೋಬಳಿ ಮಟ್ಟ, ಗ್ರಾಪಂ ಮಟ್ಟ ಹಾಗೂ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲವರ್ಧನೆ ಮಾಡಬೇಕು. ಎಪಿಎಂಸಿ ಚುನಾವಣೆ ಬಗ್ಗೆ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಹಾಗೂ ಅವರ ಗೆಲುವಿನ ಬಗ್ಗೆ ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಬೇಕು ಎಂದರು.
ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಬಗ್ಗೆ ಎಚ್.ಎಸ್. ಪುಟ್ಟಸ್ವಾಮಿ, ಕೆ.ಎಂ. ನಾಗರಾಜ್, ರೂಬೆನ್ ಮೊಸಸ್, ಬದ್ರು, ಮಂಜೇಗೌಡ, ಪವನ್ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ನಿಸಾರ್ ಅಹ್ಮದ್, ಸಿಡಿಸಿ ಅಧ್ಯಕ್ಷ ಡಿ.ಎಸ್. ಚಂದ್ರೇಗೌಡ, ಕೆಪಿಸಿಸಿ ಸದಸ್ಯ ಕೆ.ಎಂ. ಮಂಜುನಾಥ್, ಎಸ್ಸಿ, ಎಸ್ಟಿ ಅಧ್ಯಕ್ಷ ಮಲ್ಲೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯ್ಡು, ಅಕ್ಬರ್ ಅಹ್ಮದ್, ಜಿಲ್ಲಾ ಸೇವಾದಳದ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಜೇಮ್ಸ್ ಡಿಸೋಜ, ಇಂದಾವರ ಲೋಕೇಶ್ ಹಾಜರಿದ್ದರು.







