ನಿವೇಶನ ಮಂಜೂರಾತಿಗೆ ಗ್ರಾಮಸ್ಥ ರ ಒತ್ತಾಯ

ಮಡಿಕೇರಿ, ನ.6: ವಸತಿಗಾಗಿ ನಿವೇಶನ ಮತ್ತು ಸ್ಮಶಾನಕ್ಕಾಗಿ ಜಾಗವನ್ನು ಮಂಜೂರಾತಿ ಮಾಡುವಂತೆ ಒತ್ತಾಯಿಸಿ ಸುಂಟಿಕೊಪ್ಪ ಹೋಬಳಿಯ ನಾಕೂರು ಶಿರಂಗಾಲ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಗ್ರಾಮಸ್ಥರು ಕಳೆದ 40 ವರ್ಷಗಳಿಂದ ಈ ಗ್ರಾಮದಲ್ಲಿ ವಾಸಿಸುತ್ತಿರುವ ಬಡವರು ಸ್ವಂತ ಜಾಗ ಹಾಗೂ ವಸತಿಯಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಗ್ರಾಮದ ಸರ್ವೇ ಸಂಖ್ಯೆ 42:1ಪಿ1 ರಲ್ಲಿರುವ 9.75 ಎಕರೆ ಸರಕಾರಿ ಜಮೀನಿನಲ್ಲಿ ಗ್ರಾಮಸ್ಥರಿಗಾಗಿ 2 ಎಕರೆ ಜಾಗವನ್ನು ನಿವೇಶನ ಮತ್ತು ಸ್ಮಶಾನಕ್ಕಾಗಿ ಮೀಸಲಿಡಬೇಕೆಂದು ಮನವಿ ಮಾಡಿದರು. ಈಗಾಗಲೇ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಶಾಸಕರ ಗಮನಕ್ಕೂ ತರಲಾಗುವುದೆಂದು ಗ್ರಾಮಸ್ಥರು ತಿಳಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತ ನಾಡಿದ ಗ್ರಾಮಸ್ಥರು, ಗ್ರಾಮದಲ್ಲಿ ಅನೇಕ ಸಮಸ್ಯೆ ಗಳಿದ್ದು, ಗ್ರಾಪಂ ನಲ್ಲಿ ಪಿಡಿಒ ಹುದ್ದೆ ಖಾಲಿ ಇರುವು ದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿ ಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು. ಗ್ರಾಪಂ ಗೆ ಬರುತ್ತಿರುವ ಲಕ್ಷಾಂತರ ರೂ. ಅನುದಾನವನ್ನು ಸದ್ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಗ್ರಾಮದ ಕಡುಬಡವರು ಲೈನ್ ಮನೆಗಳಲ್ಲಿ ಆಶ್ರಯ ದೊರೆಯದೆ ಬೀದಿ ಪಾಲಾಗಿದ್ದಾರೆ. ಹೊರ ರಾಜ್ಯದ ಕಾರ್ಮಿಕರು ಜಿಲ್ಲೆಗೆ ಲಗ್ಗೆ ಇಟ್ಟಿರುವುದರಿಂದ ಸ್ಥಳೀಯ ಕಾರ್ಮಿಕರನ್ನು ಲೈನ್ ಮನೆಗಳಿಂದ ಖಾಲಿ ಮಾಡಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿ ಸಿದರು. ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿರುವ ಗ್ರಾಮಸ್ಥರ ಸಮಸ್ಯೆಗಳಿಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು.
ತಾಪಂ ಸದಸ್ಯರಾದ ಮಣಿ, ಗ್ರಾ.ಪಂ ಸದಸ್ಯರಾದ ಚಂದ್ರು, ಗ್ರಾಮದ ಪ್ರಮುಖರಾದ ಶಾಂತು, ಸುರೇಶ್, ಪೊನ್ನು ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು. ಕಡತ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.







