ದುಬೈ ಭಾರತೀಯ ರಾಯಭಾರ ಕಚೇರಿಯಲ್ಲಿ ಗಾಂಧಿ ಸೆಂಟರ್

ದುಬೈ, ನ.7: ಗಾಂಧೀಜಿಯವರ ಜೀವನ ಹಾಗೂ ಸಾಧನೆಯನ್ನು ಬಿಂಬಿಸುವ ಸಾಂಸ್ಕೃತಿಕ ಕೇಂದ್ರವನ್ನು ದುಬೈನಲ್ಲಿ ಆರಂಭಿಸಲು ಭಾರತೀಯ ರಾಯಭಾರ ಕಚೇರಿ ಒಪ್ಪಿಗೆ ನೀಡಿದೆ.
ದುಬೈನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿರುವ ಅನುರಾಗ್ ಭೂಷಣ್ ಅವರು ಇದಕ್ಕೆ ಅಗತ್ಯವಾದ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಗಾಂಧಿ ಕೇಂದ್ರವು, ಗಾಂಧೀಜಿಯವರ ಸಾಹಿತ್ಯ, ಕಲಾಕೃತಿಗಳು, ಖಾದಿ ಪರಿಕರಗಳು ಮತ್ತಿತರ ವಸ್ತುಗಳನ್ನು ಒಳಗೊಳ್ಳಲಿದೆ. ಇದರಿಂದ ಯುವ ಜನಾಂಗವು ರಾಷ್ಟ್ರಪಿತನಿಂದ ಸ್ಫೂರ್ತಿ ಪಡೆಯುವಂತಾಗಬೇಕು ಎನ್ನುವುದು ಇದರ ಉದ್ದೇಶ ಎಂದು ಭೂಷಣ್ ವಿವರಿಸಿದ್ದಾರೆ.
ಎರಡೂ ದೇಶಗಳು ಜಂಟಿಯಾಗಿ ಈ ಯೋಜನೆ ಅನುಷ್ಠಾನಕ್ಕೆ ತರಲಿವೆ. ಇದು ಸಣ್ಣ ಪ್ರಯತ್ನವಾಗಿದ್ದರೂ, ಇಂಥ ಯೋಜನೆ ಜಾರಿಯಾಗುತ್ತಿರುವುದು ಇದೇ ಮೊದಲು ಎನ್ನುವುದು ಮಹತ್ವದ್ದು ಎಂದು ಭೂಷಣ್ ವಿವರಿಸಿದರು. ಸರ್ದಾರ್ ಪಟೇಲ್ ಅವರ 141ನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿ ಆವರಣದಲ್ಲಿ ಗಾಂಧಿ ಪ್ರತಿಮೆ ಪ್ರತಿಷ್ಠಾಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿವರ ನೀಡಿದರು.





