ಈ ಮೂರು ಕ್ಷೇತ್ರಗಳಲ್ಲಿ ಕೇರಳವೇ ದೇಶಕ್ಕೆ ನಂ. 1

ತಿರುವನಂತಪುರಂ, ನ.7: ಕಾನೂನು ಸುವ್ಯವಸ್ಥೆ, ಆರೋಗ್ಯ ಹಾಗೂ ಪರಿಸರ- ಈ ಮೂರೂ ವಿಭಾಗಗಳಲ್ಲಿ ಕೇರಳ ದೇಶದ ಅತ್ಯುತ್ತಮ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 10 ವಿಭಾಗಗಳ ಪೈಕಿ ಐದು ವಿಭಾಗಗಳಲ್ಲಿ ಕೇರಳ ಪ್ರಥಮ ಐದು ರಾಜ್ಯಗಳ ಪಟ್ಟಿಯಲ್ಲಿದೆ. ಶಿಕ್ಷಣ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಅದು ಎರಡನೆ ಅತ್ಯುತ್ತಮ ರಾಜ್ಯವೆಂದು ಪರಿಗಣಿತವಾಗಿದೆ.
2013ರಲ್ಲಿ ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಕೇರಳದಲ್ಲಿ ಅತ್ಯಂತ ಕಡಿಮೆ (ಪ್ರತಿ 1000 ಜನನಕ್ಕೆ 12) ಆಗಿತ್ತು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸರಾಸರಿ 30 ಆಗಿತ್ತು. ರಾಜ್ಯದಲ್ಲಿ ಹಿಂಸಾತ್ಮಕ ಅಪರಾಧ ಕೂಡ ಅತ್ಯಂತ ಕಡಿಮೆ (4ಶೇ.) ಆಗಿದೆಯೆಂದು ಹೇಳಲಾಗಿದೆ. ಶಿಕ್ಷಣಕ್ಕಾಗಿ ವ್ಯಯ ಮಾಡಿದ ಮೊತ್ತ 2013-14 ಕ್ಕಿಂತ 2014-15 ರಲ್ಲಿ ಶೇ. 25 ರಷ್ಟುಹೆಚ್ಚಾಗಿದೆ. ರಾಜ್ಯದಲ್ಲಿ ಪರಿಸರ ಮಾಲಿನ್ಯಕಾರಕಗಳು ಕೂಡ ಅತ್ಯಂತ ಕಡಿಮೆಯಾಗಿದ್ದು ರಾಜ್ಯದ ಮರಗಳ ಪ್ರಮಾಣ 2013 ರಲ್ಲಿ ಇದ್ದ ಶೇ. 7.09 ಕ್ಕಿಂತ 2015 ರಲ್ಲಿ ಶೇ 7.59 ಗೆ ಹೆಚ್ಚಾಗಿದೆ.
ಸರಕಾರ ಜನರ ಜೀವನ ಮಟ್ಟವನ್ನು ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಹೇಳುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಮ್ಮ ಸರಕಾರ ಭ್ರಷ್ಟಾಚಾರ ನಿಯಂತ್ರಣ, ಸಾಂಪ್ರದಾಯಿಕ ಉದ್ಯಮಗಳ ಪುನಶ್ಚೇತನ ಹಾಗೂ ಉದ್ಯಮಶೀಲತಾ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದು ಎಂದು ಅವರು ಹೇಳಿದ್ದಾರೆ.
ನೆರೆಯ ತಮಿಳುನಾಡು 10 ವಿಭಾಗಗಳ ಪೈಕಿ 8 ರಲ್ಲಿ ಸುಧಾರಣೆ ತೋರಿಸಿದೆ. ಒಂಬತ್ತು ವಿಭಾಗಗಳಲ್ಲಿ ಅದು ಟಾಪ್ ಟೆನ್ ರಾಜ್ಯಗಳಲ್ಲೊಂದಾಗಿದೆ. ರಾಜ್ಯವು 2016ರಲ್ಲಿ ಎರಡನೆ ಅತ್ಯಂತ ಆರ್ಥಿಕವಾಗಿ ಸ್ಪರ್ಧಾತ್ಮಕ ರಾಜ್ಯವಾಗಿದೆ.ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ಮೂರು ರಾಜ್ಯಗಳಲ್ಲಿ ಅದು ಒಂದಾಗಿದೆ. ಬಡತನದ ಪ್ರಮಾಣ ಕೂಡ ರಾಷ್ಟ್ರೀಯ ಸರಾಸರಿಗಿಂತ ಈ ರಾಜ್ಯದಲ್ಲಿ ಕಡಿಮೆಯಾಗಿದೆ.







