ಟಿಪ್ಪು ಜಯಂತಿಗೆ ಬಿಜೆಪಿಗರ ವಿರೋಧ ಸರಿಯಲ್ಲ: ಸಚಿವ ಪರಮೇಶ್ವರ್

ಮಂಗಳೂರು, ನ.7: ಟಿಪ್ಪು ಜಯಂತಿ ಆಚರಣೆ ಸರಕಾರಿ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಬಿಜೆಪಿಗರು ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ವಿರೋಧಿಸಿ ಬಿಜೆಪಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ಸರಿಯಲ್ಲ. ಟಿಪ್ಪು ಜಯಂತಿ ಆಚರಣೆ ಕುರಿತು ಹಲವಾರು ಬಾರಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸದಂತೆ ಮನವಿ ಮಾಡಿಕೊಂಡರು.
ಟಿಪ್ಪು ಜಯಂತಿ ಆಚರಣೆ ಸಂಬಂಧ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಎಂ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಟಿಪ್ಪು ಜಯಂತಿ ಆಚರಣೆ ಸಂದರ್ಭ ಮೆರವಣಿಗೆ ಇತ್ಯಾದಿಗಳಿಗೆ ಅನುಮತಿ ನೀಡುವ ಕುರಿತು ಸ್ಥಳೀಯ ಸಂಸ್ಥೆಗಳು ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ರಾಜ್ಯದ ಪೊಲೀಸ್ ಸಿಬ್ಬಂದಿಯ ವೇತನ ಪರಿಷ್ಕರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾವು ವೇತನ ಪರಿಷ್ಕರಣೆಗೆ ಇಂತಿಷ್ಟೇ ಎಂದು ಸಮಯ ನಿಗದಿ ಮಾಡಿಲ್ಲ. ವೇತನ ಪರಿಷ್ಕರಣೆ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿ ಸಮಿತಿ ರಚಿಸಲಾಗಿದೆ. ಸಮಿತಿಯು ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಇಂತಹ ಕ್ರಮ ರಾಜ್ಯ ಸರಕಾರ ಕೈಗೊಂಡಿದೆ. ವರದಿಯನ್ನು ಆರ್ಥಿಕ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಶೀಘ್ರವೇ ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ಎಂದರು.







