ದೊಡ್ಡ ಹುದ್ದೆಯಲ್ಲಿರುವವರ ದೊಡ್ಡ ಮನಸ್ಸು !
ಜನಮನ ಗೆದ್ದ ಕೇಂದ್ರ ಸಚಿವರ ಕಾಳಜಿ

ಭಾರತದ ಕೇಂದ್ರ ಸಚಿವರ ಕಾರ್ಯವೈಖರಿಯ ಬಗ್ಗೆ ಟ್ವಿಟರ್ ಬಹಳಷ್ಟು ಕುತೂಹಲಕರ ವಿಷಯಗಳನ್ನು ಮುಂದಿಡುತ್ತದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರೈಲ್ವೇ ಸಚಿವ ಸುರೇಶ್ ಪ್ರಭು ಟ್ವಿಟರ್ ಮೂಲಕ ಜನರ ಸಮಸ್ಯೆಗಳನ್ನು ಕೇಳಿ ಅದನ್ನು ಪರಿಹರಿಸಿರುವುದನ್ನು ಸಾಕಷ್ಟು ಕೇಳಿದ್ದೇವೆ. ಆದರೆ ಈಗಿನ ಸುದ್ದಿಯೂ ಟ್ವಿಟರ್‌ನಲ್ಲಿಯೇ ಬಹಿರಂಗವಾದರೂ ಅಲ್ಲೇ ಪರಿಹಾರವಾದ ಸಮಸ್ಯೆಯೇನೂ ಅಲ್ಲ. ಹಾಗಿದ್ದರೂ ಆಸಕ್ತಿ ಹುಟ್ಟಿಸುವ ವಿಷಯವಾಗಿದೆ.
ಶ್ರೇಯಾ ಪ್ರದೀಪ್ ಎನ್ನುವವರು ವಿಷಯವನ್ನು ವಿವರಿಸಿ ಟ್ವೀಟ್ ಮಾಡಿದ್ದಾರೆ. ಶ್ರೇಯಾ ತಮ್ಮ ತಾಯಿಯ ಜೊತೆಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ರಾಂಚಿಯವರಾದ ಶ್ರೇಯಾ ಮತ್ತು ಅವರ ತಾಯಿಗೆ ಕಾಲಿಡಲು ಹೆಚ್ಚು ಜಾಗವಿರುವ ಎಕ್ಸ್‌ಎಲ್ ಸೀಟು ಕೊಡಲಾಗಿತ್ತು. ಶ್ರೇಯಾರ ತಾಯಿಗೆ ಕಾಲಿನ ಸಮಸ್ಯೆ ಇದ್ದ ಕಾರಣ ವಿಮಾನಯಾಣ ಸಂಸ್ಥೆ ಈ ನೆರವು ನೀಡಿತ್ತು. ಆದರೆ ವಿಮಾನ ಕೋಲ್ಕತ್ತಾದಲ್ಲಿ ಇಳಿದಾಗ ಆ ಸೀಟು ಕೇಂದ್ರ ನಾಗರಿಕ ಯಾನ ಸಚಿವ ಜಯಂತ್ ಸಿನ್ಹಾ ಮತ್ತು ಅವರ ಪತ್ನಿಯದ್ದೆಂದು ತಿಳಿಯಿತು. ಸಿನ್ಹಾರಿಗೆ ವಿಷಯ ತಿಳಿದಾಗ ಅವರು ತಾಯಿ- ಮಗಳು ಅದೇ ಸೀಟಿನಲ್ಲಿ ಮುಂದುವರಿಯುವಂತೆ ಸೂಚಿಸಿ ತಾವು ಬೇರೆ ಸೀಟು ತೆಗೆದುಕೊಂಡರು. ಈ ಬಗ್ಗೆ ಟ್ವೀಟ್ ಮಾಡಿದ ಶ್ರೇಯಾ ಸಿನ್ಹಾರಿಗೆ ಧನ್ಯವಾದ ಹೇಳಿದ್ದರು. ಸಚಿವರು ಈ ಟ್ವೀಟ್‌ಗೆ ತಕ್ಷಣ ಸ್ಪಂದಿಸಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಈ ಟ್ವೀಟ್ ನೋಡುತ್ತಲೇ ಇಂಡಿಗೋ ವಿಮಾಣದ ಟ್ವಿಟರ್ ಹ್ಯಾಂಡಲ್ ಕೂಡ ಶ್ರೇಯಾಗೆ ಹಿತಕರ ಪ್ರಯಾಣ ಸಿಕ್ಕಿತ್ತೇ ಎಂದು ವಿಚಾರಿಸಿದೆ. ಶ್ರೇಯಾ ಅವರಿಗೂ ಧನ್ಯವಾದ ಹೇಳಿದ್ದಾರೆ. “ನಾನು ಬೆಂಗಳೂರಿನಿಂದ ರಾಂಚಿಗೆ ವಿಮಾನದಲ್ಲಿ ಹೋಗುತ್ತಿದ್ದೆ. ಕೋಲ್ಕತ್ತಾದಲ್ಲಿ ವಿಮಾನ ನಿಂತಿತ್ತು. ನನ್ನ ತಾಯಿಗೆ ಕಾಲು ನೋವು ಇದ್ದ ಕಾರಣ ಬಾಗಿಲ ಬಳಿಯೇ ಇರುವ ಹೆಚ್ಚು ಕಾಲಿಡಲು ಜಾಗವಿರುವ ಖಾಲಿ ಸೀಟನ್ನು ವಿಮಾನ ಪರಿಚಾರಕರು ಕೊಟ್ಟಿದ್ದರು”. ಎಂದು ಶ್ರೇಯಾ ಹೇಳಿದ್ದಾರೆ.
ಶ್ರೇಯಾರ ಟ್ವೀಟ್ ನೋಡಿದ ಮೇಲೆ ಬಹಳಷ್ಟು ಮಂದಿ ಸಿನ್ಹಾರನ್ನು ಹೊಗಳಿದ್ದಾರೆ. ವಿಮಾನಯಾನ ಖಾತೆ ಉತ್ತಮ ವ್ಯಕ್ತಿಯ ಕೈಗಳಲ್ಲಿದೆ ಎಂದೂ ಪ್ರಶಂಸಿಸಿದ್ದಾರೆ.
ಕೃಪೆ: http://indianexpress.com/







