ಪುತ್ತೂರು: ಬೈಕ್ ಕಳವು ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಗೆ

ಪುತ್ತೂರು, ನ.7: 3 ತಿಂಗಳ ಹಿಂದೆ ಪುತ್ತೂರು ನಗರದ ಹೊರವಲಯದ ತೆಂಕಿಲ ಎಂಬಲ್ಲಿಂದ ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಬೈಕ್ ಸಮೇತ ಸುರತ್ಕಲ್ ಪೊಲೀಸರು ತಿಂಗಳ ಹಿಂದೆ ವಶಕ್ಕೆ ಪಡೆದುಕೊಂಡಿದ್ದು, ಆತನನ್ನು ಪುತ್ತೂರು ಪೊಲೀಸರು ಬಾಡಿವಾರಂಟ್ ಮೂಲಕ ತಮ್ಮ ಕಸ್ಟಡಿಗೆ ಪಡೆದು ಕೊಂಡಿದ್ದಾರೆ.
ಮಂಗಳೂರು ತಾಲೂಕಿನ ಕಾಟಿಪಳ್ಳ ನಿವಾಸಿ ಉಮರಬ್ಬ ಎಂಬವರ ಪುತ್ರ, ದಕ್ಕೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಹಂಝ(19) ಬೈಕ್ ಕಳವು ಆರೋಪಿ.
ತೆಂಕಿಲದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಬೆಳ್ತಂಗಡಿ ನಿವಾಸಿ ಜೀತ್ ಎಂಬವರಿಗೆ ಸೇರಿದ ಪಲ್ಸರ್ ಬೈಕ್ ಸೆ.8ರಂದು ರಾತ್ರಿ ಮನೆಯೆದುರಿನಿಂದಲೇ ಕಳವಾಗಿತ್ತು. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅ.10ರಂದು ಸುರತ್ಕಲ್ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಹಂಝ ಚಲಾಯಿಸುತ್ತಿದ್ದ ಬೈಕ್‌ನ ದಾಖಲೆ ಪತ್ರಗಳನ್ನು ಪರಿಶೀಲಿಸಿ ಬಳಿಕ ತನಿಖೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಆರೋಪಿ ಹಂಝನನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಮಾಹಿತಿ ಪಡೆದ ಪುತ್ತೂರು ಪೊಲೀಸರು ಹಂಝನನ್ನು ವಿಚಾರಣೆಗಾಗಿ ಬಾಡಿವಾರಂಟ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಆರೋಪಿಯನ್ನು 3 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮೈಸೂರಿನಿಂದ ಪುತ್ತೂರಿಗೆ ಬಂದು ರಾತ್ರಿ ತೆಂಕಿಲ ಕಡೆಯಿಂದ ನಡೆದು ಕೊಂಡು ಹೋಗುವ ವೇಳೆ ಪಲ್ಸರ್ ಬೈಕ್ ಕಂಡು ಅದನ್ನು ಕಳವು ಮಾಡಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿರುವುದಾಗಿ ತಿಳಿದುಬಂದಿದೆ.





