ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಡಿವೈಎಫ್‌ಐ ಮನವಿ

ಮಂಗಳೂರು, ನ.7: ದ.ಕ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು, ವೈದ್ಯರು ರೋಗಿಗಳಿಗೆ ದುಬಾರಿ ಶುಲ್ಕ ಧಿಸುತ್ತಿದ್ದಾರೆ. ಅನಗತ್ಯ ಪರೀಕ್ಷೆ, ಚಿಕಿತ್ಸೆಗಳನ್ನು ನಡೆಸುತ್ತಾರೆ. ರೋಗಿಗಳಿಗೆ ಕಾಣುವ ಸ್ಥಳದಲ್ಲಿ ಚಿಕಿತ್ಸೆಯ ದರಪಟ್ಟಿ ಪ್ರಕಟಿಸದಿರುವುದು, ಬಿಲ್‌ನ ಸಂಪೂರ್ಣ ಮೊತ್ತ ಪಾವತಿಸಲು ಸಾಧ್ಯವಾಗದ ರೋಗಿಗಳನ್ನು ಅಕ್ರಮವಾಗಿ ಬಂಧನದಲ್ಲಿಡುವುದು, ಶವಗಳನ್ನು ಬಿಟ್ಟು ಕೊಡದಿರುವುದು ಸೇರಿದಂತೆ ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಅಲ್ಲದೆ ಸಮಾನ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಭಿನ್ನ ದರಗಳನ್ನು ವಿಧಿಸುವುದು ಕಂಡುಬರುತ್ತಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾ ಸಮಿತಿಯ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿರಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆಗಳು ಸರಾಸರಿಗಿಂತ ಕೆಳಮಟ್ಟದಲ್ಲಿವೆ. ತಾಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ಜನರು ಚಿಕಿತ್ಸೆಗೆ ತೆರಳಲು ಭಯಪಡುವಂತಾಗಿದೆ. ಐದಾರು ಜಿಲ್ಲೆಗಳ ಜನಸಾಮಾನ್ಯರ ಪಾಲಿನ ಆಶಾಕಿರಣವಾಗಬೇಕಾಗಿದ್ದ ವೆನ್ಲಾಕ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಸಹಿತ ಮೂಲಭೂತ ಸೌಲಭ್ಯಗಳಿಲ್ಲದೆ ಬಡರೋಗಿಗಳ ಪಾಲಿಗೆ ನರಕದಂತಾಗಿದೆ. ಕೆಳಹಂತದ ಆಸ್ಪತ್ರೆಗಳಲ್ಲಂತೂ ಔಷಧಿ, ಸಿಬ್ಬಂದಿ ಇಲ್ಲದೆ ಜನರು ಪರದಾಡುವಂತಾಗಿದೆ ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ.
ದ.ಕ. ಜಿಲ್ಲೆಯ ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳನ್ನು ಬಳಸಿ ಸರಕಾರಿ ಮೆಡಿಕಲ್ ಕಾಲೇಜು ತೆರೆಯಬೇಕು ಎಂದೂ ನಿಯೋಗ ಮನವಿಯಲ್ಲಿ ತಿಳಿಸಿದೆ.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಬಜಾಲ್, ಕೋಶಾಧಿಕಾರಿ ಜೀವನ್‌ರಾಜ್ ಕುತ್ತಾರ್, ಸಾದಿಕ್ ಕಣ್ಣೂರು, ನೌಷಾದ್ ಬಾವು, ಉಸ್ಮಾನ್ ನಿಯೋಗದಲ್ಲಿದ್ದರು.







