ಮೋದಿ ಸರಕಾರದಡಿ ಪ್ರಜಾಪ್ರಭುತ್ವಕ್ಕೆ ಕರಾಳದಿನಗಳು: ರಾಹುಲ್ ಗಾಂಧಿ

ಹೊಸದಿಲ್ಲಿ,ನ.7: ಮೋದಿ ಸರಕಾರದ ವಿರುದ್ಧ ಸೋಮವಾರ ತೀವ್ರ ದಾಳಿ ನಡೆಸಿದ ಕಾಂಗ್ರೆಸ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಅಧಿಕಾರದ ಮದದಲ್ಲಿರುವ ಆಡಳಿತವು ತನ್ನನ್ನು ಪ್ರಶ್ನಿಸುವವರ ಧ್ವನಿಯನ್ನಡಗಿಸಲು ಬಯಸುತ್ತಿದ್ದು, ಇವು ಪ್ರಜಾಪ್ರಭುತ್ವಕ್ಕೆ ಅತ್ಯಂತ ಕರಾಳ ದಿನಗಳಾಗಿವೆ ಎಂದು ಹೇಳಿದರು.
ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು,ರಾಷ್ಟ್ರೀಯ ಭದ್ರತೆಯ ಸೋಗಿನಲ್ಲಿ ಪ್ರಶ್ನೆಗಳನ್ನು ಕೇಳುವ ನಾಗರಿಕ ಸಮಾಜಕ್ಕೆ ಭಯ ಹುಟ್ಟಿಸಲಾಗುತ್ತಿದೆ ಎಂದರು.
ಎನ್‌ಡಿಟಿವಿ ಇಂಡಿಯಾ ಹಿಂದಿ ಸುದ್ದಿವಾಹಿನಿಯ ಮೇಲೆ ಹೇರಲಾಗಿರುವ ಒಂದು ದಿನದ ನಿಷೇಧವನ್ನು ಪ್ರಸ್ತಾಪಿಸಿದ ಅವರು, ಟಿವಿ ವಾಹಿನಿಗಳನ್ನು ದಂಡಿಸಲಾಗುತ್ತಿದೆ ಮತ್ತು ಮುಚ್ಚುವಂತೆ ಅವುಗಳಿಗೆ ಸೂಚಿಲಾಗುತ್ತಿದೆ. ಸರಕಾರವನ್ನು ಪ್ರಶ್ನಿಸುವ ಪ್ರತಿಪಕ್ಷ ನಾಯಕರನ್ನು ಬಂಧಿಸಲಾಗುತ್ತಿದೆ ಎಂದರು.
ಪ್ರಜಾಪ್ರಭುತ್ವಕ್ಕೆ ಅತ್ಯಂತ ಕರಾಳ ದಿನಗಳು ಎದುರಾಗಿವೆ ಎಂದ ಅವರು,ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮೂಲಭೂತ ಸ್ವಾತಂತ್ರವನ್ನು ದಮನಿಸುವ ಸರಕಾರದ ಎಲ್ಲ ಪ್ರಯತ್ನಗಳು ಇಂತಹ ಅಪಾಯಕಾರಿ ಕುತಂತ್ರಗಳನ್ನು ವಿಫಲಗೊಳಿಸುವ ಕಾಂಗ್ರೆಸ್‌ನ ನಿರ್ಣಯವನ್ನು ಇನ್ನಷ್ಟು ಬಲಗೊಳಿಸುತ್ತವೆಯಷ್ಟೇ ಎಂದು ಹೇಳಿದರು.
ಪ್ರಶ್ನೆಗಳನ್ನು ಕೇಳಿದರೆ ಈ ಸರಕಾರಕ್ಕೆ ತುಂಬ ಕಿರಿಕಿರಿಯಾಗುತ್ತದೆ,ಏಕೆಂದರೆ ಅದರ ಬಳಿ ಉತ್ತರಗಳೇ ಇಲ್ಲ. ಪ್ರತಿಯೊಂದು ವೇದಿಕೆಯಲ್ಲಿ,ವಿಶೇಷವಾಗಿ ಮುಂಬರುವ ಸಂಸತ್ ಅಧಿವೇಶನದಲ್ಲಿ ಸರಕಾರದ ವೈಫಲ್ಯಗಳನ್ನು ನಾವು ಬಹಿರಂಗಗೊಳಿಸಬೇಕು ಎಂದರು.
ಕಳೆದ ಕೆಲವು ದಿನಗಳಿಂದ ಒಆರ್‌ಒಪಿ ವಿಷಯವನ್ನು ಎತ್ತುತ್ತಲೇ ಇರುವ ರಾಹುಲ್,ಇತ್ತೀಚಿನ ದಿನಗಳಲ್ಲಿ ನಮ್ಮ ಯೋಧರು ದಶಕಗಳಲ್ಲಿಯೇ ಅತ್ಯಂತ ಹೆಚ್ಚಿನ ಸಾವುನೋವುಗಳನ್ನು ಅನುಭವಿಸಿದ್ದಾರೆ. ಒಆರ್‌ಒಪಿ ನಿರಾಕರಣೆ ಮತ್ತು ಅಂಗವಿಕಲತೆ ಪಿಂಚಣಿಯಲ್ಲಿ ಕಡಿತದ ಮೂಲಕ ಈ ನಿಷ್ಕರುಣಿ ಸರಕಾರವು ಅವರನ್ನು ಕ್ರೂರವಾಗಿ ಪುರಸ್ಕರಿಸುತ್ತಿದೆ ಎಂದು ಕಿಡಿಕಾರಿದರು.







