ನಾಳ ಕ್ಷೀರಗಂಗಾ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ, ನ.7: ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ 695 ಹಾಲು ಉತ್ಪಾದಕರ ಸಂಘಗಳು ಕಾರ್ಯಾಚರಿಸುತ್ತಿದ್ದು, ಪ್ರತಿದಿನ 4.38 ಲಕ್ಷ ಲೀ. ಹಾಲಿನ ಉತ್ಪಾದನೆಯಾಗುತ್ತಿದೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದ್ದಾರೆ.
ಅವರು ಸೋಮವಾರ ನಾಳ ಹಾಲು ಉತ್ಪಾದಕರ ಸಹಕಾರ ಸಂಘ ನೂತನ ಕಟ್ಟಡ ಕ್ಷೀರಗಂಗಾವನ್ನು ಉದ್ಘಾಟಿಸಿ ಮಾತನಾಡಿದರು.
ಒಕ್ಕೂಟದ ವ್ಯಾಪ್ತಿಯಲ್ಲಿರುವ 409 ಸಂಘಗಳು ಸ್ವಂತ ಕಟ್ಟಡವನ್ನು ಹೊಂದಿದೆ. ರಾಜ್ಯದ 14 ಒಕ್ಕೂಟಗಳಲ್ಲಿ ನಮ್ಮ ಒಕ್ಕೂಟ ಅತ್ಯುತ್ತಮ ಒಕ್ಕೂಟ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಜಿಲ್ಲಾ ಹಾಲು ಒಕ್ಕೂಟದಿಂದ ಹೈನುಗಾರರ ಮನೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ರಾಜ್ಯದ ಇತರ ಜಿಲ್ಲೆಗಳಲ್ಲಿ ಬರಗಾಲದಿಂದ ಮೇವಿನ ಕೊರತೆ, ನೀರಿನ ಕೊರತೆಯಿಂದ ಹೈನುಗಾರಿಕೆಗೆ ತೊಂದರೆಯಾಗುತ್ತಿದ್ದ ಸ್ಥಿತಿ ಇಂದು ದಕ್ಷಿಣ ಕನ್ನಡ ಜಿಲ್ಲೆಗೂ ಬರುವ ಪರಿಸ್ಥಿತಿಯಲ್ಲಿದೆ. ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಯ ಬರಗಾಲವನ್ನು ಹೊಂದುವ ದಿನ ದೂರವಿಲ್ಲ. ಇದರಿಂದ ಜಿಲ್ಲೆಯ ಜನಜೀವನದ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದರು.
ಸಂಘದ ಅಧ್ಯಕ್ಷ ಗಣಪತಿ ಭಟ್ ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಎಂ. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ದ.ಕ. ಹಾಲು ಒಕ್ಕೂಟದ ನಿರ್ದೇಶಕ ಬಿ.ನಿರಂಜನ್, ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್, ಕಾರ್ಯನಿರ್ವಹಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ, ವ್ಯವಸ್ಥಾಪಕ ನಿತ್ಯಾನಂದ ಭಕ್ತ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸುಧಾಕರ ಮಜಲು ಸ್ವಾಗತಿಸಿದರು. ಕಾರ್ಯದರ್ಶಿ ಸೌಮ್ಯಾ ವರದಿ ವಾಚಿಸಿದರು. ಹಾಲು ಪರೀಕ್ಷಕ ವೆಂಕಪ್ಪ ವಂದಿಸಿದರು. ಶಿಕ್ಷಕ ಸತೀಶ್ ಕುಮಾರ್ ಎನ್. ಕಾರ್ಯಕ್ರಮ ನಿರೂಪಿಸಿದರು.







