"ಸರಿಯಾಗಿ ಈಜಲು ಗೊತ್ತಿಲ್ಲ, ಎಲ್ಲ ದೇವರ ಕೈಯಲ್ಲಿದೆ" ಎಂದೇ ಹಾರಿದ್ದರು ಇಬ್ಬರು ನಟರು !
ನಿರ್ಲಕ್ಷ್ಯದಿಂದಲೇ ಬಲಿಯಾಯಿತು ಎರಡು ಜೀವಗಳು
ಬೆಂಗಳೂರು, ನ.7 : ಮಾಸ್ತಿ ಗುಡಿ ಚಿತ್ರದ ಕ್ಲೈಮ್ಯಾಕ್ಸ್ ನ ಸ್ಟಂಟ್ ಚಿತ್ರೀಕರಣದ ವೇಳೆ ನೀರು ಪಾಲಾಗಿರುವ ನಟರಾದ ಉದಯ್ ಹಾಗು ಅನಿಲ್ ದುರಂತ ನಡೆಯುವ ಕೆಲವೇ ಕ್ಷಣಗಳ ಮೊದಲು ನಮಗೆ ಸರಿಯಾಗಿ ಈಜಲು ಬರುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದರು! .
ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ " ನನಗೆ ಈಜಲು ಗೊತ್ತಿದೆ. ಆದರೆ ಇಷ್ಟು ಎತ್ತರದಿಂದ ಇದೇ ಮೊದಲ ಬಾರಿ ಹಾರುತ್ತಿದ್ದೇನೆ. ಹಾಗಾಗಿ ನರ್ವಸ್ ಆಗಿದ್ದೇನೆ. ಏನಾಗುತ್ತೆ ಗೊತ್ತಿಲ್ಲ. ನನಗೆ ಸ್ವಲ್ಪ ಮಾತ್ರ ಈಜಲು ಗೊತ್ತು. ಎರಡು ಮೂರು ಸ್ಟ್ರೋಕ್ ಗಳಲ್ಲಿ ದಡ ಸೇರುವಂತ ಬಾವಿಯಲ್ಲಿ ಮಾತ್ರ ಈವರೆಗೆ ಈಜಿದ್ದೇನೆ. ಅಷ್ಟೇ ಈಜು ನನಗೆ ಗೊತ್ತಿರುವುದು. 30 / 60 ಅಡಿ ದೂರ ಈಜಿ ನನಗೆ ಅಭ್ಯಾಸವಿಲ್ಲ " ಎಂದು ಅನಿಲ್ ಹೇಳಿದ್ದರು.
ಉದಯ್ ಮಾತನಾಡಿ " ಈ ದೃಶ್ಯಕ್ಕಾಗಿ ಯಾವುದೇ ನಿರ್ದಿಷ್ಟ ಪ್ರಾಕ್ಟೀಸ್ ಮಾಡಿಲ್ಲ. ನಾನು ಈಗ ಬಂದಿದ್ದೇನೆ. ಇಲ್ಲಿ ಪರಿಣಿತರು ಇದ್ದಾರೆ. ವಿಜಯ್ ಇದ್ದಾರೆ. ನಾವು ಮೂವರು ನೀರಿಗೆ ಹಾರುತ್ತೇವೆ. ನನಗೆ ಅಷ್ಟೇ ಗೊತ್ತು. ಉಳಿದದ್ದು ದೇವರಿಗೆ ಬಿಟ್ಟಿದ್ದು " ಎಂದು ಹೇಳಿದ್ದರು. ಜೊತೆಗೆ ನನಗೆ " ಎತ್ತರದ ಭಯ ಇದೆ. ಒಂದನೇ ಮಹಡಿಯಿಂದ ಕೆಳಗೆ ನೋಡಿದರೇ ನನಗೆ ಭಯವಾಗುತ್ತೆ. ದೇವರ ದಯೆಯಿಂದ ಎಲ್ಲ ಸರಿಯಾಗಬಹುದು " ಎಂದೂ ಅವರು ಹೇಳಿದ್ದರು.
ದುನಿಯಾ ವಿಜಯ್, ಉದಯ್ ಮತ್ತು ಅನಿಲ್ - ಹೆಲಿಕಾಪ್ಟರ್ ನಿಂದ 100 ಅಡಿ ಎತ್ತರದಿಂದ ನೀರಿಗೆ ಹಾರುವ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದೆ. ಬೆಂಗಳೂರಿನಿಂದ 35 ಕಿಮಿ ದೂರದಲ್ಲಿ ಮಾಗಡಿ ರಸ್ತೆಯಲ್ಲಿರುವ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಈ ಘಟನೆ ನಡೆದಿದೆ. ಹಾರಿದ ಮೇಲೆ ವಿಜಯ್ ಮಾತ್ರ ಬದುಕುಳಿದಿದ್ದು ಉಳಿದಿಬ್ಬರು ನೀರು ಪಾಲಾಗಿದ್ದಾರೆ. ದೃಶ್ಯದ ಚಿತ್ರೀಕರಣದ ಮೊದಲು ವಿಜಯ್ ಸುರಕ್ಷತಾ ಕವಚಗಳನ್ನು ಹಾಕಿಕೊಳ್ಳುವುದನ್ನು ನೋಡಲಾಗಿದೆ. ಆದರೆ ಉದಯ್ ಹಾಗು ಅನಿಲ್ ಅಂತಹ ಯಾವುದೇ ಕವಚ ಧರಿಸಿದ್ದು ಕಂಡು ಬಂದಿಲ್ಲ.
ದುಬಾರಿ ವೆಚ್ಚದಲ್ಲಿ ನಡೆಸಲಾಗುತ್ತಿದ್ದ ಈ ಸ್ಟಂಟ್ ನ ಚಿತ್ರೀಕರಣವನ್ನು ರೆಕಾರ್ಡ್ ಮಾಡಲು ಹಲವು ಸುದ್ದಿ ವಾಹಿನಿಗಳ ವರದಿಗಾರರು, ಕ್ಯಾಮರಾಮೆನ್ ಗಳು ಬಂದಿದ್ದರು. ಆದರೆ ಆಂಬುಲೆನ್ಸ್ ಹಾಗು ಸುರಕ್ಷತಾ ತಂಡಗಳು ಮಾತ್ರ ಇರಲಿಲ್ಲ ಎಂದು ಹೇಳಲಾಗಿದೆ. ಚಿತ್ರ ತಂಡದ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದೆ.