ಗೋವಾ ಪ್ರಯಾಣಿಕರನ್ನು ಲಕ್ನೋ ವಿಮಾನಕ್ಕೆ ಹತ್ತಿಸಿದರು!
ಗಂಭೀರ ಸುರಕ್ಷತಾ ಲೋಪ, ತೀವ್ರ ಅನಾನುಕೂಲ

ಹೊಸದಿಲ್ಲಿ,ನ.7: ಖಾಸಗಿ ಸಂಸ್ಥೆಯ ಉದ್ಯೋಗಿಗಳಾಗಿರುವ ಆ ಮಹಿಳೆಯರಿಬ್ಬರೂ ಸಮ್ಮೇಳನವೊಂದಲ್ಲಿ ಪಾಲ್ಗೊಳ್ಳಲು ಗೋವಾಕ್ಕೆ ಹೊರಟಿದ್ದರು. ಅದಕ್ಕಾಗಿ ಕಳೆದ ಗುರುವಾರ ದಿಲ್ಲಿಯಿಂದ ಗೋವಾಕ್ಕೆ ತೆರಳುವ ಗೋ ಏರ್ ವಿಮಾನದಲ್ಲಿ ಟಿಕೆಟ್‌ಗಳನ್ನೂ ಬುಕ್ ಮಾಡಿದ್ದರು. ಕಳೆದ ಗುರುವಾರ ಗೋವಾಕ್ಕೆ ಪ್ರಯಾಣಿಸಲು ವಿಮಾನ ನಿಲ್ದಾಣವನ್ನು ತಲುಪಿದ್ದ ಅವರನ್ನು ಗೋ ಏರ್ ಸಿಬ್ಬಂದಿಗಳು ಲಕ್ನೋಕ್ಕೆ ತೆರಳಲಿದ್ದ ವಿಮಾನಕ್ಕೆ ಹತ್ತಿಸಿಬಿಟ್ಟಿದ್ದರು!
ವಿಮಾನದ ಏಣಿಯ ಬಳಿಯಿದ್ದ ಸಿಬ್ಬಂದಿಯೂ ಅವರ ಪಾಸ್‌ಗಳನ್ನು ಸರಿಯಾಗಿ ಪರಿಶೀಲಿಸದೆ ವಿಮಾನದೊಳಗೆ ಬಿಟ್ಟಿದ್ದ. ತಮಗಾಗಿ ಮೀಸಲಾಗಿದ್ದ ಆಸನಗಳಲ್ಲಿ ಈ ಮಹಿಳೆಯರು ಕುಳಿತುಕೊಂಡೂ ಆಗಿತ್ತು. ಆದರೆ ಚೆಕ್ ಇನ್ ಆಗಿದ್ದ ಅವರ ಬ್ಯಾಗುಗಳು ಗೋವಾ ವಿಮಾನವನ್ನು ಸೇರಿಕೊಂಡಿದ್ದವು. ಕೆಲವೇ ಸಮಯದಲ್ಲಿ ಅವರ ಬಳಿ ಬಂದ ಗಗನಸಖಿ,ನೀವು ತಪ್ಪು ವಿಮಾನವನ್ನು ಹತ್ತಿದ್ದೀರಿ ಎಂದು ಹೇಳಿ ಅವರನ್ನು ಕೆಳಗಿಳಿಸಿದ್ದಳು. ಆ ವೇಳೆಗಾಗಲೇ ಗೋವಾದ ವಿಮಾನ ನಿರ್ಗಮಿಸಿತ್ತು. ಗೋವಾಕ್ಕೆ ಹೊರಡುವ ಮುಂದಿನ ವಿಮಾನದಲ್ಲಿ ನಿಮ್ಮನ್ನು ಕಳುಹಿಸುತ್ತೇವೆ ಎಂದು ಸಿಬ್ಬಂದಿಗಳು ತಿಳಿಸಿದ್ದರು. ಅದಕ್ಕಾಗಿ ಮಹಿಳೆಯರು ಗಂಟೆಗಟ್ಟಲೆ ನಿಲ್ದಾಣದಲ್ಲಿ ಕಾಯುವಂತಾಗಿತ್ತು.
ಅಂದ ಹಾಗೆ ಅವರ ಬ್ಯಾಗುಗಳ ಗತಿ? ಗೋವಾ ವಿಮಾನದಲ್ಲಿ ನಿಮ್ಮ ಸಹೋದ್ಯೋಗಿ ಗಳಿದ್ದರೆ ಬ್ಯಾಗುಗಳನ್ನು ತೆಗೆದುಕೊಳ್ಳುವಂತೆ ತಿಳಿಸಿ,ಇಲ್ಲದಿದ್ದರೆ ಗೋವಾದಲ್ಲಿಯ ನಮ್ಮ ಸಿಬ್ಬಂದಿಗಳು ಅವುಗಳನ್ನು ಸುರಕ್ಷಿತವಾಗಿ ಇಟ್ಟಿರುತ್ತಾರೆ,ಅಲ್ಲಿಗೆ ತಲುಪಿದ ಮೇಲೆ ತೆಗೆದುಕೊಳ್ಳಿ ಎಂಬ ಪುಕ್ಕಟೆ ಸಲಹೆಯನ್ನೂ ಅವರಿಗೆ ನೀಡಲಾಗಿತ್ತು. ನಡೆದ ತಪ್ಪಿನ ಬಗ್ಗೆ ಗೋ ಏರ್‌ನ ಯಾವುದೇ ಅಧಿಕಾರಿ ಅವರಲ್ಲಿ ಕ್ಷಮೆಯನ್ನೂ ಕೋರಿರಲಿಲ್ಲ.
ಕೊನೆಗೂ ಈ ಮಹಿಳೆಯರು ಗಂಟೆಗಟ್ಟಲೆ ವಿಳಂಬವಾಗಿ ಗೋವಾ ತಲುಪಿದೆರೆನ್ನಿ, ಸಮ್ಮೇಳನಕ್ಕೆ ಅವರ ಹಾಜರಾತಿಯೂ ವಿಳಂಬಗೊಂಡಿತ್ತು.
ಈ ಘಟನೆ ನಮ್ಮ ವಿಮಾನ ನಿಲ್ದಾಣಗಳಲ್ಲಿಯ ಗಂಭೀರ ಭದ್ರತಾ ಲೋಪಗಳನ್ನು ಬೆಟ್ಟು ಮಾಡಿದೆ. ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ದ ನಿಯಮದಂತೆ ತಮ್ಮ ಬೋರ್ಡಿಗ್ ಪಾಸ್‌ಗಳನ್ನು ಪಡೆದುಕೊಂಡ,ಆದರೆ ಯಾವುದೋ ಕಾರಣಕ್ಕೆ ವಿಮಾನವನ್ನು ಹತ್ತದ ಪ್ರಯಾಣಿಕರ ಬ್ಯಾಗ್‌ಗಳನ್ನು ಅಲ್ಲಿಯೇ ಇಳಿಸುವುದು ಕಡ್ಡಾಯವಾಗಿದೆ.ಬ್ಯಾಗ್‌ಗಳ ಮಾಲಕರಿಲ್ಲದೆ ಅವುಗಳನ್ನು ವಿಮಾನದಲ್ಲಿ ಸಾಗಿಸುವಂತಿಲ್ಲ. ಆದರೆ ಗೋಏರ್ ಸಿಬ್ಬಂದಿಗಳು ಈ ಬಗ್ಗೆ ಅಥವಾ ಪ್ರಯಾಣಿಕರಿಗುಂಟಾದ ಅನಾ ನುಕೂಲತೆಯ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ.
ಸಾಮಾನ್ಯವಾಗಿ ಇಂತಹ ದೂರುಗಳನ್ನು ನಾವು ಸ್ವಯಂಪ್ರೇರಿತವಾಗಿ ಗಂಭೀರವಾಗಿ ಪರಿಗಣಿಸುತ್ತೇವೆ. ವಿಮಾನಯಾನ ಸಂಸ್ಥೆ ಅಥವಾ ಪ್ರಯಾಣಿಕರು ನಮಗೆ ದೂರು ಸಲ್ಲಿಸಬಹುದಾಗಿದೆ. ನಮ್ಮ ಗಮನಕ್ಕೆ ತಂದರೆ ನಾವು ಈ ಬಗ್ಗೆ ಪರಿಶೀಲಿಸುತ್ತೇವೆ ಮತ್ತು ವಿಮಾನಯಾನ ಸಂಸ್ಥೆಯಿಂದ ವಿವರಣೆಯನ್ನೂ ಕೇಳಬಹುದು ಎಂದು ಡಿಜಿಸಿಎದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಇಂತಹ ಘಟನೆ ನಡೆದಿರುವುದು ಇದೇ ಮೊದಲ ಬಾರಿಯೇನಲ್ಲ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪ್ಪು ವಿಮಾನಗಳಿಗೆ ಹತ್ತಿಸಿರುವ ಹಲವಾರು ನಿದರ್ಶನಗಳಿವೆ. ಈ ಹಿಂದೆ ಮುಂಬೈನಿಂದ ಮಂಗಳೂರಿಗೆ ಟಿಕೆಟ್ ಬುಕ್ ಮಾಡಿದ್ದ ಏರ್ ಇಂಡಿಯಾ ಪ್ರಯಾಣಿಕನನ್ನು ರಾಯಪುರಕ್ಕೆ ತೆರಳುವ ವಿಮಾನಕ್ಕೆ ಹತ್ತಿಸಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ನಾಗಪುರದಲ್ಲಿ ವೀಲ್‌ಚೇರ್‌ನಲ್ಲಿದ್ದ ಪ್ರಯಾಣಿಕರೋರ್ವರನ್ನು ಅವರು ಪ್ರಯಾಣಿಸಬೇಕಾಗಿದ್ದ ಇಂಡಿಗೋ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ಅರ್ಧ ಗಂಟೆಯ ಬಳಿಕ ಬೇರೆ ಕಡೆಗೆ ತೆರಳಲಿದ್ದ ಇನ್ನೊಂದು ಇಂಡಿಗೋ ವಿಮಾನಕ್ಕೆ ಹತ್ತಿಸ ಲಾಗಿತ್ತು. ಆದರೆ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮಾಡಿದ್ದ ತಪ್ಪಿನ ಮುಂದೆ ಇವೆಲ್ಲ ಏನೂ ಅಲ್ಲ. ಕೊಚ್ಚಿಯಿಂದ ಮುಂಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವನ್ನು ಹತ್ತಲು 40 ಪ್ರಯಾಣಿಕರು ಟರ್ಮ್ಯಾಕ್‌ನಲ್ಲಿದ್ದ ಬಸ್ಸಿನಲ್ಲಿ ಕಾಯುತ್ತಿದ್ದಾಗಲೇ ವಿಮಾನವು ಅವರನ್ನು ’ಮರೆತು’ ಮುಂಬೈಗೆ ಹಾರಿಬಿಟ್ಟಿತ್ತು!







