ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ: ಪ್ರಮೋದ್
ಮಾರ್ಗದರ್ಶಿ ಸರಳೀಕರಣಕ್ಕೆ ಕೆಡಿಪಿ ಸಭೆಯಲ್ಲಿ ನಿರ್ಣಯ

ಉಡುಪಿ, ನ.7: ಅನುದಾನದ ಕೊರತೆ ಇರುವ ರಸ್ತೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ಅಭಿವೃದ್ಧಿ ತ್ರೈಮಾಸಿಕ(ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯ ಶಾಸಕರೊಂದಿಗೆ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್, ನಬಾರ್ಡ್ ಸೇರಿದಂತೆ ಹಲವು ಇಲಾಖೆಗಳ ರಸ್ತೆಗಳ ನಿರ್ವಹಣೆಗೆ ಅನುದಾನ ಕೊರತೆ ದೊಡ್ಡ ಸಮಸ್ಯೆಯಾಗಿದ್ದು, ಈಗಾಗಲೇ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿ ನಿರ್ವಹಣೆ ಸಾಧ್ಯವಾಗದಿರುವ ರಸ್ತೆಗಳ ಪಟ್ಟಿ ಮಾಡಿ ನ.21ರೊಳಗೆ ಪ್ರಸ್ತಾವನೆಯನ್ನು ಸಿದ್ದಪಡಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್ ಅವರಿಗೆ ಸಚಿವರು ಸೂಚನೆ ನೀಡಿದರು.
ಮಾರ್ಗಸೂಚಿ ಸರಳೀಕರಣ
ಜಿಲ್ಲೆಯ ಗ್ರಾಮೀಣ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಈಗಿರುವ ಮಾರ್ಗಸೂಚಿಯನ್ನು ಸರಳೀಕರಣಗೊಳಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಈಗಿರುವ ನಿಯಮದ ಪ್ರಕಾರ ಜಿಲ್ಲೆಯ ಸಾವಿರ ಕಿ.ಮೀ.ರಸ್ತೆಗಳಲ್ಲಿ 482.62 ಕಿ.ಮೀ. ರಸ್ತೆಗಳನ್ನು ಮಾತ್ರ ಉನ್ನತೀಕರಣಗೊಳಿಸಬಹುದಾಗಿದೆ ಎಂದು ಇಂಜಿನಿಯರ್ ಚಂದ್ರಶೇಖರ್ ತಿಳಿಸಿದರು. ಕರಾವಳಿ ಜಿಲ್ಲೆಯಲ್ಲಿ ಹೆಚ್ಚು ಜನಸಂದಣಿ ಇರುವುದರಿಂದ ರಸ್ತೆಗಳ ಅಗಲ ಸಾಕಷ್ಟು ಕಿರಿದಾಗಿದ್ದು, ಹಾಗಾಗಿ ಇಲ್ಲಿಗೆ ಅನ್ವಯವಾಗುವ ರೀತಿಯಲ್ಲಿ ಮಾರ್ಗಸೂಚಿಯನ್ನು ಸರಳೀಕರಣಗೊಳಿಸಬೇಕು. ಇಲ್ಲದಿದ್ದರೆ ನಮ್ಮ ಜಿಲ್ಲೆಗೆ ಸಾಕಷ್ಟು ಅನ್ಯಾಯವಾಗುತ್ತದೆ ಎಂದು ಸಚಿವರು ತಿಳಿಸಿದರು.
ಮರಳಿನ ಕುರಿತು ನಿರ್ಣಯ
ಜಿಲ್ಲೆಯಲ್ಲಿ ಯಾಂತ್ರೀಕೃತ ಮರಳುಗಾರಿಕೆಗೆ ಅವಕಾಶ ನೀಡದೆ ಕೇವಲ ಸಂಪ್ರದಾಯಿಕ ಮರಳುಗಾರಿಕೆ ಮಾತ್ರ ನಡೆಸುವುದು. ಸ್ಥಳೀಯರಿಗೆ ಮಾತ್ರ ಮರಳುಗಾರಿಕೆ ನಡೆಸಲು ಅವಕಾಶ ನೀಡುವುದು. ಹೊರ ಜಿಲ್ಲೆಗಳಿಗೆ ಮರಳು ಸಾಗಾಟ ಮಾಡುವುದನ್ನು ನಿಷೇಧಿಸುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಮರಳು ನೀತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಕಾನೂನು ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದ್ದು, ಅದರಲ್ಲಿ ಕರಾವಳಿಯ ಸಚಿವರನ್ನು ಕೂಡ ಸೇರಿಸಿಕೊಳ್ಳಲಾಗಿದೆ. ಅಲ್ಲಿ ಈ ಬಗ್ಗೆ ಚರ್ಚಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಆರ್‌ಎಂಎಸ್‌ಎ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉತ್ತರಿಸಲು ಸಭೆಯಲ್ಲಿ ಹಾಜರಿಲ್ಲದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ನೋಟಿಸ್ ಜಾರಿ ಮಾಡುವಂತೆ ಸಚಿವರು ಸೂಚಿದರು.
ದೂರಿನ ಬಗ್ಗೆ ತನಿಖೆಗೆ ಸೂಚನೆ
ಮರಳುಗಾರಿಕೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸುವ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷ ಹಾಗೂ ಕುಂದಾಪುರ ತಾಪಂ ಉಪಾಧ್ಯಕ್ಷರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಮಹೇಶ್‌ರನ್ನು ಶಾಸಕರಾದ ಗೋಪಾಲ ಪೂಜಾರಿ ಹಾಗೂ ಪ್ರತಾಪ್ ಚಂದ್ರ ಶೆಟ್ಟಿ ತೀವ್ರ ತರಾಟೆಗೆ ತೆಗೆದುಕೊಂಡರು.
ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಅವರ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಈ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮುಂದಿನ ಸಭೆಯಲ್ಲಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಶೇ.96ರಷ್ಟು ಆಧಾರ್ ಲಿಂಕ್
ಉಡುಪಿ ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಶೇ.96ರಷ್ಟು ಆಧಾರ್ ಲಿಂಕ್ ಹಾಗೂ ಶೇ.86ರಷ್ಟು ಫ್ಯಾಮಿಲಿ ಲಿಂಕ್ ನೀಡಲಾಗಿದೆ. ಲಿಂಕ್‌ನಲ್ಲಿ ಉಡುಪಿ ರಾಜ್ಯದಲ್ಲಿ 18ನೆ ಸ್ಥಾನದಲ್ಲಿದೆ. ಉಡುಪಿಯಲ್ಲಿ ಶೇ.92, ಕಾರ್ಕಳ ಶೇ.94 ಹಾಗೂ ಕುಂದಾಪುರ ತಾಲೂಕಿನಲ್ಲಿ ಶೇ.82ರಷ್ಟು ಪ್ರಗತಿಯಾಗಿದೆ ಎಂದು ಆಹಾರ ಮತ್ತು ನಾಗರಿಕ ಸರರಾಜು ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗೀಶ್ವರ ಸಭೆಗೆ ತಿಳಿಸಿದರು.
ಪಡಿತರ ಕೂಪನ್‌ಗಳನ್ನು ವಿತರಿಸಲು ಹೊಸದಾಗಿ 52 ಅಂಗಡಿಗಳನ್ನು ಗುರುತಿಸಲಾಗಿದೆ. ಮುಂದೆ ಆಯಾ ಗ್ರಾಪಂಗಳಲ್ಲೂ ಕೂಪನ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಇನ್ನು ಹೆಚ್ಚಿನ ಸೈಬರ್ ಕೆಫೆಗಳಲ್ಲಿ ಕೂಪನ್ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಸಚಿವರು ತಿಳಿಸಿದರು.
ಬಿಪಿಎಲ್ ಕುಟುಂಬಗಳ ವಿದ್ಯುತ್ ಬಿಲ್ ಮಿತಿಯನ್ನು ತಿಂಗಳಿಗೆ 450 ರೂ.ನಿಂದ ಗ್ರಾಮೀಣ ಪ್ರದೇಶದಲ್ಲಿ 836ರೂ. ಮತ್ತು ಪಟ್ಟಣ ಪ್ರದೇಶದಲ್ಲಿ 860ರೂ.ಗೆ ಏರಿಸಲಾಗಿದೆ. ಈ ಹಿಂದೆ 450ರೂ.ಗಿಂತ ಹೆಚ್ಚಿಗೆ ಬಿಲ್ ಬಂದ ಕಾರಣಕ್ಕೆ ಕಾರ್ಡ್ ರದ್ದಾಗಿರುವವರಿಗೆ ಮತ್ತೆ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ ಎಂದು ಯೋಗೇಶ್ವರ್ ತಿಳಿಸಿದರು. ವಿವಿಧ ಕಾರಣಗಳಿಂದ ಬಿಪಿಎಲ್ ಕಾರ್ಡ್ ರದ್ದುಗೊಂಡವರಿಗೆ ಮತ್ತೆ ಮೇನ್ಮವಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಪ್ರತಾಪ್‌ಚಂದ್ರ ಶೆಟ್ಟಿ ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಮುಖ್ಯಕಾರ್ಯನಿರ್ವ ಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಉಪಾಧ್ಯಕ್ಷ ಶೀಲಾ ಕೆ. ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ. ಬಾಲಕೃಷ್ಣ ಉಪಸ್ಥಿತರಿದ್ದರು.







