ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿಗಳು

ಬಂಟ್ವಾಳ, ನ.7: ಇಲ್ಲಿನ ಪುರಸಭಾ ವ್ಯಾಪ್ತಿಯ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪುರಸಭೆ, ತಾಲೂಕಿನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಜಗದೀಶ್ ಚುರುಕು ಮುಟ್ಟಿಸಿದರಲ್ಲದೆ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಹಂಚಿ,ಅವುಗಳನ್ನು ಒಂದು ವಾರದೊಳಗಾಗಿ ಕಾರ್ಯಗತಗೊಳಿಸುವಂತೆ ಖಡಕ್ ಆದೇಶ ನೀಡಿದ್ದಾರೆ.
ರಸ್ತೆ ಅಗಲೀಕರಣ, ಬಸ್‌ಬೇ ನಿರ್ಮಾಣ, ಪಾರ್ಕಿಂಗ್ ಸಮಸ್ಯೆ, ಅಕ್ರಮ ಕಟ್ಟಡಗಳ ತೆರವು ಸೇರಿದಂತೆ ಪುರಸಭಾ ವ್ಯಾಪ್ಯಿಯ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೋಮವಾರ ಸಂಜೆ ಪುರಸಭೆಯಲ್ಲಿ ಅವರು ರಾಷ್ಟ್ರೀಯ ಹೆದ್ದಾರಿ, ರಾ.ಹೆ.ಪ್ರಾಧಿಕಾರ ಸೇರಿದಂತೆ ತಾಲೂಕಿನ ಅಧಿಕಾರಿಗಳ ಹಾಗೂ ಪುರಸಭಾ ಸದಸ್ಯರ ಸಭೆ ನಡೆಸಿ ಪುರಸಭಾ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.
ಪುರಸಭಾ ಸದಸ್ಯರಿಂದ ಇಲ್ಲಿನ ಸಮಸ್ಯೆಗಳನ್ನು ಆಲಿಸಿ ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. ಮಣಿಹಳ್ಳ ಬಳಿ ರಸ್ತೆ ಅಗಲೀಕರಣ, ಬಿ.ಸಿ.ರೋಡು, ಕೈಕಂಬ, ಹಾಗೂ ಬಂಟ್ವಾಳ ಬೈಪಾಸ್‌ನಲ್ಲಿ ಬಸ್ ಬೇ ನಿರ್ಮಾಣಕ್ಕೆ ಸರ್ವೇ, ಚರಂಡಿ ನಿರ್ಮಾಣ, ಸರ್ವಿಸ್ ರಸ್ತೆಗೆ ಡಾಮರೀಕರಣ ಮೊದಲಾದ ಕೆಲಸಗಳನ್ನು ಒಂದು ವಾರದೊಳಗಾಗಿ ಆರಂಭಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಅಜಿತ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು. ಸ್ಥಳೀಯ ಅಂಗಡಿದಾರರಿಗೆ ಪರಿಹಾರ ಮೊತ್ತ ನೀಡಿಯೂ ರಸ್ತೆ ಅಗಲೀಕರಣಕ್ಕೆ ತೊಡಕಾಗುವ ಕಟ್ಟಡಗಳನ್ನು ತೆರವುಗೊಳಿಸದಿರುವ ಬಗ್ಗೆ ಎನ್‌ಎಚ್‌ಎಐ ಇಂಜಿನಿಯರ್‌ನ್ನು ಡಿಸಿ ತರಾಟೆಗೆ ತೆಗೆದುಕೊಂಡರು.
ಪಾಣೆಮಂಗಳೂರು ನೇತ್ರಾವತಿ ನದಿ ತೀರದಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿರುವ ಕಟ್ಟಡವನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಹಾಗೂ ಮುಖ್ಯಾಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿ ನೇತ್ರಾವತಿ ನದಿಗೆ ಕಸ ಎಸೆಯುವವರ ವಿರುದ್ಧ ನಿಗಾ ಇಡುವಂತೆ ತಿಳಿಸಿದರು. ಪುರಸಭಾ ವ್ಯಾಪ್ತಿಯೊಳಗಿರುವ ಎಲ್ಲ ಅಕ್ರಮ ಕಟ್ಟಡಗಳಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಅನಧಿಕೃತ ಅಂಗಡಿಗಳ ತೆರವುಗೊಳಿಸುವಂತೆ ಪುರಸಭಾ ಮುಖ್ಯಾಧಿಕಾರಿ ಸುಧಾಕರ್‌ಗೆ ಸೂಚಿಸಿದರು.
ಪುರಸಭೆ ಸಾಮಾನ್ಯ ಸಭೆಯ ನಿರ್ಣಯಗಳು ಅನುಷ್ಠಾನಗೊಳ್ಳದಿರುವ ಬಗ್ಗೆ ವಿಪಕ್ಷ ಸದಸ್ಯ ಗೋವಿಂದ ಪ್ರಭು ಅವರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಭೆಯ ಎಲ್ಲ ನಿರ್ಣಯಗಳು ಅನುಷ್ಠಾನಗೊಳಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಮಾತ್ರವದಲ್ಲದೆ, ಈ ಬಗ್ಗೆ ತಪ್ಪುವರದಿ ನೀಡಿದರೆ ಶಿಸ್ತು ಕ್ರಮ ಎದುರಿಸಬೇಕಾದಿತು ಎಂದು ಎಚ್ಚರಿಸಿದರು. ಬಿ.ಸಿ.ರೋಡ್ ಬಸ್ ತಂಗುದಾಣ ನಿರ್ಮಿಸಲು ನೆಲ ಸಮತಟ್ಟುಗೊಳಿಸಿದ್ದ ಸ್ಥಳಕ್ಕೆ ತಾ.ಪಂ. ಅಧಿಕಾರಿಗಳು ಬೇಲಿ ಹಾಕಿರುವ ಬಗ್ಗೆ ತಾಪಂ ಕಾರ್ಯನಿರ್ವಾಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಪುರಸಭೆಯ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿದ್ದೀರಿ. ಅದಕ್ಕೆ ಪರಿಹಾರವಾಗಿ ತಾಲೂಕು ಪಂಚಾಯತ್‌ನ ಜಾಗದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್‌ಬೇ ನಿರ್ಮಾಣಕ್ಕೆ ಬೇಲಿಯನ್ನು ತೆರವುಗೊಳಿಸುವಂತೆ ಸೂಚಿಸಿದರು. ಸಣ್ಣ ಪಟ್ಟ ಸಮಸ್ಯೆ ಬಗ್ಗೆಯೂ ಪುರಸಭಾ ಸದಸ್ಯರು ಜಿಲ್ಲಾಧಿಕಾರಿಯ ಗಮನ ಸೆಳೆದಾಗ ಎಲ್ಲವೂ ಜಿಲ್ಲಾಧಿಕಾರಿ ಸಭೆಯಲ್ಲಿ ಪ್ರಸ್ತಾಪವಾಗುವುದಾದರೆ ಇಲ್ಲಿ ಪುರಸಭೆ ಕೌನ್ಸಿಲ್, ಅಧಿಕಾರಿಗಳು ಯಾಕಿರುವುದು? ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸಭೆಯ ಬಳಿಕ ಮಣಿಹಳ್ಳ, ಬಂಟ್ವಾಳ ಬೈಪಾಸ್ ಜಂಕ್ಷನ್, ಪಾಣೆಮಂಗಳೂರು, ಕೈಕುಂಜೆ, ಬಿ.ಸಿ.ರೋಡು ಹಾಗೂ ಕೈಕಂಬಕ್ಕೆ ಅಧಿಕಾರಿಗಳೊಂದಿಗೆ ಬೇಟಿ ನೀಡಿದ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಬಗ್ಗೆ ಮಾರ್ಗದರ್ಶನ ಮಾಡಿದರು. ಅಧೀನ ಅಧಿಕಾರಿಗಳಿಗೆ ಸೂಚಿಸಿರುವ ಎಲ್ಲ ಕೆಲಸಗಳ ಮೇಲ್ವಿಚಾರಣೆ ಮಾಡುವಂತೆ ಪ್ರೊಬೆಷನರಿ ಸಹಾಯಕ ಆಯುಕ್ತೆ ಗಾರ್ಜಿ ಜೈನ್‌ಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹ್ಮಮದ್ ನಂದರಬೆಟ್ಟು, ಸದಸ್ಯರಾದ ಮುಹಮ್ಮದ್ ಶರೀಫ್, ಗಂಗಾಧರ್, ಜಗದೀಶ ಕುಂದರ್, ಮುಹಮ್ಮದ್ ಇಕ್ಬಾಲ್ ಐ.ಎಂ.ಆರ್. ಗೂಡಿನ ಬಳಿ, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್., ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಯೋಜನಾ ನಿದೇರ್ಶಕ ಪ್ರಸನ್ನ, ಕಾರ್ಯನಿರ್ವಾಹಕ ಇಂಜಿನಿಯರ್ ತೇಜೋಮೂರ್ತಿ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿಪ್ರಯಾನ್ ಮಿರಾಂದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಅಜಿತ್ ಕುಮಾರ್, ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಉಮೇಶ್ ಭಟ್, ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.







