ರಾಜ್‌ಕೋಟ್‌ನಲ್ಲಿ 2 ಏಕದಿನ , 1 ಟ್ವೆಂಟಿ-20 ಪಂದ್ಯ
ಪೂಜಾರ, ಜಡೇಜಗೆ ತವರಿನಲ್ಲಿ ಚೊಚ್ಚಲ ಟೆಸ್ಟ್

ಹೊಸದಿಲ್ಲಿ, ನ.7: ಗುಜರಾತ್‌ನ ಸೌರಾಷ್ಟ್ರ ಪ್ರದೇಶವು ಕ್ರಿಕೆಟ್‌ನಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಕ್ರಿಕೆಟ್ ಆರಂಭಗೊಳ್ಳುವ ಹೊತ್ತಿಗೆ ಇದು ನವನಗರವಾಗಿತ್ತು. 1936-37ರಲ್ಲಿ ರಣಜಿ ಟ್ರೋಫಿ ಪ್ರಶಸ್ತಿ ಜಯಿಸಿತ್ತು.
ಸೌರಾಷ್ಟ್ರ ಮೂವರು ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ರೂಪಿಸಿದ ಖ್ಯಾತಿಯನ್ನು ಹೊಂದಿದೆ. ಚೇತೇಶ್ವರ ಪೂಜಾರ, ರವೀಂದ್ರ ಜಡೇಜ ಮತ್ತು ಜಯದೇವ್ ಉನದ್ಕಟ್ ಇದೇ ಪ್ರದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿದವರು.
ರಾಜ್‌ಕೋಟ್‌ನ ಹೊರವಲಯದ ಖಂಡೇರಿಯಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ (ಎಸ್‌ಸಿಎ) ಸ್ಟೇಡಿಯಂನಲ್ಲಿ ನ.9ರಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೊದಲ ಕ್ರಿಕೆಟ್ ಟೆಸ್ಟ್ ಆರಂಭಗೊಳ್ಳಲಿದೆ. ಇದು ಈ ಸ್ಟೇಡಿಯಂನಲ್ಲಿ ನಡೆಯಲಿರುವ ಚೊಚ್ಚಲ ಟೆಸ್ಟ್ ಆಗಿರುತ್ತದೆ. ಸ್ಥಳೀಯ ಕ್ರಿಕೆಟ್ ಅಭಿಮಾನಿಗಳು ಆನೇಕ ವರ್ಷಗಳಿಂದ ಇಲ್ಲಿ ಟೆಸ್ಟ್ ಕ್ರಿಕೆಟ್‌ನ್ನು ವೀಕ್ಷಿಸುವ ಕನಸು ಕಾಣುತ್ತಿದ್ದರು. ಇದೀಗ ಅವರ ಕನಸು ನನಸಾಗುತ್ತಿದೆ.
ಎಸ್‌ಸಿಎ ಸ್ಟೇಡಿಯಂ 28,000 ಮಂದಿಗೆ ಕ್ರಿಕೆಟ್ ವೀಕ್ಷಣೆಗೆ ಆಸನದ ವ್ಯವಸ್ಥೆ ಹೊಂದಿದೆ. ಈ ಸ್ಟೇಡಿಯಂನಲ್ಲಿ ಎರಡು ಏಕದಿನ ಮತ್ತು ಒಂದು ಟ್ವೆಂಟಿ-20 ಪಂದ್ಯ ನಡೆದಿದೆ.
2013, ಜನವರಿ 11ರಂದು ಮೊದಲ ಏಕದಿನ ಪಂದ್ಯವನ್ನು ಇಲ್ಲಿ ಆಯೋಜಿಸಲಾಗಿತ್ತು. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಟೀಮ್ ಇಂಡಿಯಾವನ್ನು ಇಂಗ್ಲೆಂಡ್ 9 ರನ್‌ಗಳ ಅಂತರದಿಂದ ಮಣಿಸಿತ್ತು. 2015, ಅಕ್ಟೋಬರ್ 18ರಂದು ನಡೆದ ಇನ್ನೊಂದು ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕ 18 ರನ್‌ಗಳ ಜಯ ಗಳಿಸಿತ್ತು.
2013, ಅ.10ರಂದು ನಡೆದ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 6 ವಿಕೆಟ್ಗಳ ಜಯ ಗಳಿಸಿತ್ತು.
2016ರಿಂದ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ಐಪಿಎಲ್ ಗುಜರಾತ್ ಲಯನ್ಸ್ ತಂಡದ ತವರಿನ ಸ್ಟೇಡಿಯಂ ಆಗಿದೆ. ಇಲ್ಲಿ ಐಪಿಎಲ್‌ನ ಐದು ಪಂದ್ಯಗಳನ್ನು ಆಯೋಜಿಸಲಾಗಿತ್ತು.





