ಬರ ಪರಿಹಾರ: ವಿಳಂಬ ಬೇಡ

ರಾಜ್ಯದ ಬರ ಪರಿಸ್ಥಿತಿಯ ಕುರಿತು ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ನೀರಜಾ ನೇತೃತ್ವದ ಬರ ಅಧ್ಯಯನ ತಂಡ ರಾಜ್ಯದ ಬರ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವಾಪಸಾಗಿದೆ. ಕಳೆದ ಮೂರು ವರ್ಷಗಳಿಂದ ಬೆಂಬತ್ತಿ ಕಾಡುತ್ತಿರುವ ಬರಗಾಲದಿಂದ ತತ್ತರಿಸಿ ಹೋಗಿರುವ ಕರ್ನಾಟಕ ಈ ಬಾರಿ ಇನ್ನಷ್ಟು ಯಾತನೆಗೊಳಗಾಗಿದೆ. ರಾಜ್ಯದ ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ದಾವಣಗೆರೆ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಹೀಗೆ ಒಟ್ಟು ಹದಿನೈದು ಜಿಲ್ಲೆಗಳಲ್ಲಿ ಸಂಚರಿಸಿದ ತಂಡ ರಾಜ್ಯದಲ್ಲಿ ಭೀಕರ ಬರ ಇದೆ ಎಂಬುದನ್ನು ಒಪ್ಪಿಕೊಂಡಿದೆ. 139 ತಾಲೂಕುಗಳು ಬರಪೀಡಿತ ಎಂದು ಸರಕಾರ ಈಗಾಗಲೇ ಘೋಷಿಸಿದೆ. ಮುಂಬರುವ ದಿನಗಳಲ್ಲಿ ಇನ್ನೂ ಕೆಲ ಜಿಲ್ಲೆಗಳು ಈ ಪಟ್ಟಿಗೆ ಸೇರ್ಪಡೆಯಾಗಬಹುದು. ಕೇಂದ್ರ ತಂಡ ಸಂಗ್ರಹಿಸಿದ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಕೇಂದ್ರದಿಂದ ಹೆಚ್ಚಿನ ನೆರವಿನ ಪ್ರಮಾಣ ಬರಬಹುದೆಂದು ನಿರೀಕ್ಷಿಸಲಾಗಿದೆ. ರಾಜ್ಯದಲ್ಲಿ 139 ತಾಲೂಕುಗಳಲ್ಲಿ ಕವಿದಿರುವ ಬರಗಾಲದಿಂದಾಗಿ 12,145 ಕೋಟಿ ರೂ. ನಷ್ಟ ಉಂಟಾಗಿದೆ. ಈ ಸಮೀಕ್ಷೆಯನ್ನು ಆಧರಿಸಿ 3,345 ಕೋಟಿ ರೂ. ನೆರವನ್ನು ಕೇಳಲಾಗಿದೆ. ಅನಾವೃಷ್ಟಿ ಮಾತ್ರವಲ್ಲ ಅತಿವೃಷ್ಟಿ ಕೂಡಾ ಈ ಬಾರಿ ಆಗಿದೆ. ಹೈದರಾಬಾದ್ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ 2,485 ಕೋಟಿ ರೂ. ಬೆಳೆೆ ನಷ್ಟ ಉಂಟಾಗಿದೆ. ಇದಕ್ಕಾಗಿ ಬೆಳೆೆ ನಷ್ಟ ಪರಿಹಾರವಾಗಿ ಕೇಂದ್ರದಿಂದ 385 ಕೋಟಿ ರೂ. ನೆರವನ್ನು ಕೇಳಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ತಿಳಿಸಿದ್ದ್ದಾರೆ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 200 ದಿನಗಳ ಕೆಲಸ ನೀಡುವಂತೆ ಸಚಿವರು ಶಿಫಾರಸು ಮಾಡಿದ್ದಾರೆ.
ರಾಜ್ಯದ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿಯೂ ಭೀಕರ ಬರಗಾಲದ ಕರಾಳ ಛಾಯೆ ಕವಿದಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕರ್ನಾಟಕವನ್ನು ಕಾಡುತ್ತಿರುವ ಬರಗಾಲದಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಬೆಳೆ ನಷ್ಟದ ಪರಿಣಾಮವಾಗಿ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳಿಂದ ಪಡೆದ ಕೃಷಿ ಸಾಲವನ್ನು ಹಿಂದಿರುಗಿಸಲು ಈವರೆಗೆ ರೈತರಿಗೆ ಸಾಧ್ಯವಾಗಿಲ್ಲ. 2013ರಿಂದ ಈವರೆಗೆ ರಾಜ್ಯದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇ.75ರಷ್ಟು ಪ್ರದೇಶ ಬರಗಾಲಕ್ಕೆ ತುತ್ತಾಗಿದೆ. ಇಂತಹ ಸನ್ನಿವೇಶದಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಹೋಗಿರುವ ಕೇಂದ್ರ ತಂಡ ತಕ್ಷಣವೇ ಸೂಕ್ತವಾದ ವರದಿಯನ್ನು ನೀಡಬೇಕು. ಬರೀ ತಾತ್ಕಾಲಿಕ ಪರಿಹಾರಗಳಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ತುರ್ತಾಗಿ ಕೇಂದ್ರ ಸರಕಾರ ವಿಶೇಷ ಪ್ಯಾಕೇಜನ್ನು ಘೋಷಿಸಬೇಕು. ಈ ಬಾರಿ ಮಳೆಯಾಗದೆ 13 ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಶೇ.60ಕ್ಕಿಂತ ನೀರು ಕಡಿಮೆಯಾಗಿದೆ. ಲಿಂಗನಮಕ್ಕಿ, ಕೂಪಾ ಮುಂತಾದ ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದನೆಗೂ ನೀರು ಸಾಕಾಗುವುದಿಲ್ಲ. ಇಷ್ಟೇ ಅಲ್ಲದೆ ಈ ಬಾರಿ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲೂ ಹಿಂದಿನ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಇಂತಹ ಭೀಕರ ಪರಿಸ್ಥಿತಿಯ ಬಗ್ಗೆ ಕೇಂದ್ರ ತಂಡ ವರದಿ ನೀಡಿದರೆ ಸಾಲದು. ರಾಜ್ಯ ಸರಕಾರ ಇನ್ನೊಂದು ಸಮಗ್ರ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಇದನ್ನು ಈಗಾಗಲೇ ಒಪ್ಪಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಸ್ವತಃ ದಿಲ್ಲಿಗೆ ಹೋಗಿ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಯವರು ಮಾತ್ರವಲ್ಲ ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಸಚಿವರು ಕೂಡಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಬರ ಪರಿಹಾರ ಕಾರ್ಯದಲ್ಲಿ ರಾಜಕೀಯ ಅಡ್ಡ ಬರಬಾರದು. ಈ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಕೂಡಾ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು. ಈ ಬಾರಿ ಕರ್ನಾಟಕ ಹಾಗೂ ದಕ್ಷಿಣಭಾರತದ ಕೆಲವು ಪ್ರದೇಶಗಳನ್ನು ಹೊರತು ಪಡಿಸಿದರೆ ಉಳಿದ ಕಡೆ ಬರದ ಪರಿಸ್ಥಿತಿ ಇಲ್ಲ. ಹೀಗಾಗಿ ಕೇಂದ್ರಕ್ಕೆ ಹೆಚ್ಚಿನ ನೆರವಿನ ಒತ್ತಡ ಬೇರೆ ರಾಜ್ಯಗಳಿಂದ ಬರುವುದಿಲ್ಲ. ಆದ್ದರಿಂದ ಕೇಂದ್ರ ಸರಕಾರ ತಕ್ಷಣ ಕರ್ನಾಟಕದ ಬೇಡಿಕೆಯಾದ 4 ಸಾವಿರ ಕೋಟಿ ರೂ. ನೆರವನ್ನು ರಾಜ್ಯಕ್ಕೆ ನೀಡಬೇಕಾಗಿದೆ. ಬರ ಪರಿಹಾರಧನ ನೇರವಾಗಿ ರೈತನಿಗೆ ತಲುಪುವ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಹಿಂದಿನ ಅನುಭವದಿಂದ ಹೇಳುವುದಾದರೆ ಬರಪರಿಹಾರಕ್ಕೆ ಬಂದ ಹಣ ನೇರವಾಗಿ ರೈತನಿಗೆ ತಲುಪದೆ ಮಧ್ಯವರ್ತಿಗಳ ಜೇಬಿಗೆ ಹೋದ ಆರೋಪಗಳಿವೆ. ಈ ಬಾರಿ ಹಾಗಾಗಬಾರದು. ಯಾವುದೇ ಕಾರಣಕ್ಕೂ ಬರ ಪರಿಹಾರದ ಹಣ ಸೋರಿಕೆಯಾಗಬಾರದು. ದಲ್ಲಾಳಿಗಳ ಜೇಬಿಗೆ ಹೋಗಬಾರದು. ಅದಕ್ಕಾಗಿ ಸರಿಯಾದ ವಿತರಣೆಗಾಗಿ ಸರಕಾರ ಪಾರದರ್ಶಕವಾದ ಒಂದು ವ್ಯವಸ್ಥೆಯನ್ನು ಮಾಡಬೇಕಾಗಿದೆ.
ಕೇಂದ್ರದ ಅಧ್ಯಯನ ತಂಡವೇನೋ ರಾಜ್ಯದಲ್ಲಿ ಸಂಚರಿಸಿ ಸೂಕ್ತವಾದ ವರದಿಯನ್ನು ನೀಡಬಹುದು. ಆದರೆ, ಇವಿಷ್ಟರಿಂದಲೇ ಪ್ರಯೋಜನವಾಗುವುದಿಲ್ಲ. ಕೇಂದ್ರ ಸರಕಾರಕ್ಕೆ ಈ ವರದಿಯನ್ನು ಒಪ್ಪಿಸಿ ತಕ್ಷಣ ನೆರವಿಗೆ ಬರುವಂತೆ ಮಾಡಲು ರಾಜ್ಯ ಸರಕಾರ ಮಾತ್ರವಲ್ಲ ಪ್ರಮುಖ ಪ್ರತಿಪಕ್ಷಗಳೂ ಕೇಂದ್ರದ ಮೇಲೆ ಒತ್ತಡ ತರಬೇಕಾಗಿದೆ. ಅನಾವೃಷ್ಟಿ ಉಂಟಾದ ಪ್ರದೇಶಗಳಲ್ಲಿ ಮಾತ್ರವಲ್ಲ ಅತಿವೃಷ್ಟಿ ಉಂಟಾದ ಪ್ರದೇಶಗಳಲ್ಲೂ ರೈತರ ನೆರವಿಗೆ ಸರಕಾರ ಧಾವಿಸಬೇಕಾಗಿದೆ. ಕೇಂದ್ರದ ಅಧ್ಯಯನ ತಂಡ ನೀಡಿದ ವರದಿಯನ್ನು ಅಂತರ್ ಇಲಾಖಾ ಕಾರ್ಯದರ್ಶಿಗಳ ಸಭೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಕೇಂದ್ರ ಗೃಹ, ಹಣಕಾಸು ಹಾಗೂ ಕೃಷಿ ಸಚಿವರನ್ನೊಳಗೊಂಡ ಸಮಿತಿ ಸಭೆ ಸೇರಿ ನೆರವಿನ ಮೊತ್ತವನ್ನು ಘೋಷಿಸುವುದು ಈವರೆಗಿನ ಸಂಪ್ರದಾಯವಾಗಿದೆ. ಆದರೆ, ಈ ಬಾರಿ ಯಾವುದೇ ಕಾರಣಕ್ಕೂ ಬರ ಪರಿಹಾರ ಘೋಷಣೆಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕಾಗಿದೆ. ತೀವ್ರ ಬರಗಾಲದಿಂದಾಗಿ ಅನೇಕ ಜಿಲ್ಲೆಗಳಲ್ಲಿ ಜನ ಗುಳೆ ಹೋಗುತ್ತಿದ್ದಾರೆ. ಜನರು ಗುಳೆ ಹೋಗುವುದನ್ನು ತಡೆಗಟ್ಟಬೇಕಾಗಿದೆ. ಇದಕ್ಕಾಗಿ ಅವರಿಗೆ ಅವರಿದ್ದ ಊರುಗಳಲ್ಲೇ ಉದ್ಯೋಗಾವಕಾಶವನ್ನು ಕಲ್ಪಿಸಬೇಕು. ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸರಕಾರ ಬರ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜನ್ನು ತಕ್ಷಣ ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕದ ಸರ್ವಪಕ್ಷ ನಿಯೋಗ ದಿಲ್ಲಿಗೆ ಹೋಗಿ ಕೇಂದ್ರ ಸರಕಾರದ ಮೇಲೆ ಒತ್ತಡ ತರುವುದು ಅಗತ್ಯವಾಗಿದೆ. ಅಧ್ಯಯನ ತಂಡದ ವರದಿಯ ಜೊತೆಗೆ ರಾಜ್ಯಸರಕಾರದ ವಿಶೇಷ ವರದಿಯನ್ನು ಕೂಡಾ ಕೇಂದ್ರ ಸರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ







