ಮೂವರು ಆಯ್ಕೆಗಾರರನ್ನು ವಜಾಗೊಳಿಸುವ ಡಿಡಿಸಿಎ ನಿರ್ಧಾರವನ್ನು ಅಮಾನತು ಗೊಳಿಸಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ, ಜಸ್ಟೀಸ್ ಮುಕುಲ್ ಮುಗ್ದಲ್ ಆಯ್ಕೆ ಸಮಿತಿಗೆ ನೇಮಕಗೊಳಿಸಿದ ಮೂವರನ್ನು ಕೈ ಬಿಡುವ ಡಿಡಿಸಿಎ ನಿರ್ಧಾರವನ್ನು ಡಿಲ್ಲಿ ಹೈಕೋರ್ಟ್ ಇಂದು ಅಮಾನತುಗೊಳಿಸಿದೆ.
ಆಯ್ಕೆ ಸಮಿತಿಗೆ ನೇಮಕಗೊಂಡಿದ್ದ ಮಾಜಿ ಕ್ರಿಕೆಟಿಗರಾದ ಮಣಿಂದರ್ ಸಿಂಗ್, ಅತುಲ್ ವಾಸನ್ ಮತ್ತು ನಿಕಿಲ್ ಚೋಪ್ರಾ ಅವರಿಗೆ ನೀಡಬೇಕಿದ್ದ ವೇತನವನ್ನು 48 ಗಂಟೆಗಳ ಒಳಗಾಗಿ ಪಾವತಿಸುವಂತೆ ಡಿಲ್ಲಿ ಡಿಸ್ಟ್ರೀಕ್ಟ್ ಕ್ರಿಕೆಟ್ ಅಸೋಸಿಯೇಶನ್‌ಗೆ ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ದೀಪಾ ಶರ್ಮ ಅವರನ್ನೊಳಗೊಂಡ ದಿಲ್ಲಿ ನ್ಯಾಯಾಲಯದ ಪೀಠವು ಈ ಆದೇಶ ನೀಡಿದೆ. ಡಿಡಿಸಿಎ ತನ್ನ ವ್ಯಾಪ್ತಿಯನ್ನು ಮೀರಿ ಹೆಜ್ಜೆ ಇರಿಸಿದ್ದು, ನ್ಯಾಯಪೀಠ ಡಿಡಿಸಿಎ ಕೈಗೊಂಡಿರುವ ನಿರ್ಧಾರವನ್ನು ಅಮಾನತುಗೊಳಿಸಿ್ದು, ಮುಂದಿನ ಆದೇಶವನ್ನು ಕಾಯ್ದಿರಿಸಿದೆ.
ಡಿಡಿಸಿಎ ಪ್ರತಿಯೊಬ್ಬರ ತಾಳ್ಮೆ ಪರೀಕ್ಷೆಗೆ ಮುಂದಾಗಿದೆ. ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮುಕುಲ್ ಮುಗ್ದಲ್ ನೇಮಕ ಮಾಡಿದ್ದ ಮೂವರನ್ನು ಕೈ ಬಿಡುವ ಡಿಡಿಸಿಎ ನಿರ್ಧಾರದ ವಿರುದ್ಧ ಮುಗ್ದಲ್ ಸಮಿತಿಯ ವಕೀಲರಾದ ನಿತಿನ್ ಮಿಶ್ರಾ ನ್ಯಾಯಾಲಯದ ಮೊರೆ ಹೋಗಿ ಡಿಡಿಸಿಎಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆ ವೇಳೆ ಹಾಜರಿದ್ದ ಡಿಡಿಸಿಎ ವಕೀಲರಾದ ಅಮನ್ ಲೇಖಿ ಸ್ವಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿ ಆಯ್ಕೆ ಸಮಿತಿಯ ಸದಸ್ಯರಿಗೆ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ವಿಚಾರದ ಬಗ್ಗೆ ಮುಂದೆ ಆಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ





