ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವಕ್ಕೆ ವಿರೋಧ
ನಿಲುವಿಗೆ ಅಂಟಿಕೊಂಡ ಚೀನಾ
ಬೀಜಿಂಗ್, ನ.7: ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವ ನಿರ್ಣಯವನ್ನು ವಿರೋಧಿಸುವ ತನ್ನ ನಿಲುವು ಅಚಲ ಎಂದಿರುವ ಚೀನಾ, ಎನ್‌ಪಿಟಿಗೆ ಸಹಿ ಹಾಕದ ರಾಷ್ಟ್ರಗಳಿಗೆ ಸದಸ್ಯತ್ವ ನೀಡುವ ನಿಯಮಗಳನ್ನು ಪ್ರಮುಖ ರಾಷ್ಟ್ರಗಳು ಅಂತಿಮಗೊಳಿಸಿದ ಬಳಿಕವಷ್ಟೇ ಈ ಬಗ್ಗೆ ಪರಿಶೀಲಿಸಬಹುದು ಎಂದು ತಿಳಿಸಿದೆ. ನವೆಂಬರ್ 11 ಮತ್ತು 12ರಂದು ವಿಯೆನ್ನಾದಲ್ಲಿ ನಡೆಯಲಿರುವ ಎನ್‌ಎಸ್‌ಜಿ ಸರ್ವಸದಸ್ಯರ ಸಭೆಯಲ್ಲಿ ಕೂಡಾ ಚೀನಾವು ಭಾರತಕ್ಕೆ ಸದಸ್ಯತ್ವ ನೀಡುವುದನ್ನು ವಿರೋಧಿಸಲಿದೆ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 48 ಸದಸ್ಯ ರಾಷ್ಟ್ರಗಳ ಈ ಸಭೆಯಲ್ಲಿ ಎನ್‌ಪಿಟಿಗೆ ಸಹಿ ಹಾಕದ ರಾಷ್ಟ್ರಗಳನ್ನು ಸದಸ್ಯರನ್ನಾಗಿ ಸೇರಿಸುವ ಎರಡು ಹಂತದ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುವ ಸಂಭವವಿದೆ. ಸದಸ್ಯತ್ವದ ಆಕಾಂಕ್ಷಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಇದುವರೆಗೆ ಎನ್‌ಪಿಟಿಗೆ ಸಹಿ ಹಾಕಿಲ್ಲ. ನವೆಂಬರ್ 4ರಂದು ಹೈದರಾಬಾದಿನಲ್ಲಿ ಭಾರತ- ಚೀನಾ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯ ಬಗ್ಗೆ ಉಲ್ಲೇಖಿಸಿದ ಅವರು, ಚೀನಾವು ಭಾರತ ಸೇರಿದಂತೆ ಸಂಬಂಧಿತ ರಾಷ್ಟ್ರಗಳ ಜೊತೆ ನಿಕಟ ಸಂಪರ್ಕದಲ್ಲಿದೆ ಎಂದರು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾಂಗ್ ಜೀಚಿ ಅವರ ಮಧ್ಯೆ ನಡೆದಿದ್ದ ಮಾತುಕತೆಯಲ್ಲಿ ಎನ್‌ಎಸ್‌ಜಿಗೆ ಭಾರತದ ಸೇರ್ಪಡೆ ವಿಷಯ ಚರ್ಚೆಗೆ ಬಂದಿತ್ತು ಎನ್ನಲಾಗಿದೆ. ಅ.31ರಂದು ದಿಲ್ಲಿಯಲ್ಲಿ ಜಂಟಿ ಕಾರ್ಯದರ್ಶಿ (ನಿಶ್ಯಸ್ತ್ರೀಕರಣ ಮತ್ತು ಅಂತರಾಷ್ಟ್ರೀಯ ಭದ್ರತೆ)ಅಮನ್‌ದೀಪ್ ಸಿಂಗ್ ಗಿಲ್ ಮತ್ತು ಚೀನಾದ ಜಂಟಿ ಕಾರ್ಯದರ್ಶಿ ವಾಂಗ್ ಕುನ್ ಅವರ ನಡುವೆ ನಡೆದಿದ್ದ ಮಾತುಕತೆಯಲ್ಲೂ ಈ ವಿಷಯ ಚರ್ಚಿಸಲಾಗಿತ್ತು. ಚೀನಾವು ಎನ್‌ಎಸ್‌ಜಿ ಸದಸ್ಯತ್ವದ ವಿಷಯದಲ್ಲಿ ಪಾಕಿಸ್ತಾನದ ಜೊತೆ ಕೂಡಾ ಮಾತುಕತೆ ನಡೆಸುತ್ತಿದೆ. ಪಾಕಿಸ್ತಾನಕ್ಕೆ ಹೋಲಿಸಿದಲ್ಲಿ ಪರಮಾಣು ಅಸ್ತ್ರಗಳ ಪ್ರಸಾರ ನಿರ್ಬಂಧಿಸುವಲ್ಲಿ ಭಾರತದ ದಾಖಲೆ ಉತ್ತಮವಿರುವ ಕಾರಣ ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವ ಬಗ್ಗೆ ಹೆಚ್ಚಿನ ಸದಸ್ಯ ರಾಷ್ಟ್ರಗಳು ಒಲವು ಹೊಂದಿದ್ದು ಈ ನಿಟ್ಟಿನಲ್ಲಿ ಕಾರ್ಯನಿರ್ವಹಣಾ ವಿಧಾನ ರೂಪಿಸುವ ಬಗ್ಗೆ ವಿಯೆನ್ನಾ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.





