ಹಿಲರಿಗೆ ಬಲ ತುಂಬಿದ ಎಫ್‌ಬಿಐ
ವಾಶಿಂಗ್ಟನ್, ನ. 7: ಖಾಸಗಿ ಇಮೇಲ್ ಸರ್ವರ್ ಹೊಂದಿರುವ ಪ್ರಕರಣದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಹೂಡುವ ಇರಾದೆಯಿಲ್ಲ ಎಂಬುದಾಗಿ ಸೋಮವಾರ ಎಫ್‌ಬಿಐ ಘೋಷಿಸಿದೆ.
ಈ ಘೋಷಣೆಯ ಹಿನ್ನೆಲೆಯಲ್ಲಿ, ಅಧ್ಯಕ್ಷೀಯ ಚುನಾವಣೆಗೆ ಒಂದು ದಿನ ಉಳಿದಿರುವಂತೆಯೇ, ಹಿಲರಿ ಕ್ಲಿಂಟನ್ ತನ್ನ ಎದುರಾಳಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗಿಂತ ಸ್ಪರ್ಧೆಯಲ್ಲಿ ಮುಂದೆ ಸಾಗಿದ್ದಾರೆ.
ಉಳಿದಿರುವ ಒಂದು ದಿನದಲ್ಲಿ ಇಬ್ಬರೂ ಅಭ್ಯರ್ಥಿಗಳು ‘ಬ್ಯಾಟಲ್‌ಗ್ರೌಂಡ್’ (ಯಾರ ಪರವಾಗಿಯೂ ಫಲಿತಾಂಶ ಬರಬಲ್ಲ) ರಾಜ್ಯಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ರವಿವಾರ ಕಾಂಗ್ರೆಸ್‌ನಲ್ಲಿ ಹೇಳಿಕೆಯೊಂದನ್ನು ನೀಡಿದ ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮಿ, ಹಿಲರಿಯ ನೂತನವಾಗಿ ಪತ್ತೆಯಾದ ಇಮೇಲ್‌ಗಳ ವಿಶ್ಲೇಷಣೆಯನ್ನು ತನಿಖಾಧಿಕಾರಿಗಳು ಪೂರ್ಣಗೊಳಿಸಿದ್ದು, ಜುಲೈಯಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಬದಲಿಸಲು ಕಾರಣಗಳಿಲ್ಲ ಎಂದು ಹೇಳಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಹಿಲರಿ ಖಾಸಗಿ ಇಮೇಲ್ ಸರ್ವರ್ ಬಳಸುವ ಮೂಲಕ ತಪ್ಪು ಮಾಡಿಲ್ಲ ಎಂಬುದಾಗಿ ಜುಲೈಯಲ್ಲಿ ಎಫ್‌ಬಿಐ ನಿರ್ಧಾರಕ್ಕೆ ಬಂದಿತ್ತು.
ಇದರಿಂದ ಹಿಲರಿಗೆ ಲಾಭವಾಗುತ್ತದೋ ಅಥವಾ ಎದುರಾಳಿ ಟ್ರಂಪ್‌ರ ವಾಗ್ದಾಳಿಯಿಂದ ಪಾರಾಗುತ್ತಾರೋ ಎನ್ನುವುದು ನಿಶ್ಚಿತವಿಲ್ಲ. ಹಿಲರಿಯ ಹೊಸ ಇಮೇಲ್‌ಗಳು ಪತ್ತೆಯಾಗಿವೆ ಎಂಬುದಾಗಿ ಎಫ್‌ಬಿಐ ನಿರ್ದೇಶಕರು ಕಾಂಗ್ರೆಸ್‌ಗೆ ಹೇಳಿಕೆ ನೀಡಿದ ಬಳಿಕದ 10 ದಿನಗಳಲ್ಲಿ ಲಕ್ಷಾಂತರ ಮತದಾರರು ಮುಂಚಿತ ಮತದಾನ ಮಾಡಿದ್ದಾರೆ.





