ಭಾರತೀಯ ಮೂಲದ ವ್ಯಕ್ತಿಗೆ ಜೈಲು, ದಂಡ
ಹುಸಿ ಬಾಂಬ್ ಕರೆ
ಜಿನೆವಾ, ನ.7: ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ ಭಾರತೀಯ ಮೂಲದ ವ್ಯಕ್ತಿಯೋರ್ವನಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು 51,200 ಅಮೆರಿಕ ಡಾಲರ್ ದಂಡ ವಿಧಿಸಲಾಗಿದೆ. ಈತನ ಹೆಸರು ಬಹಿರಂಗಗೊಳಿಸಿಲ್ಲ. ಸ್ವಿಝರ್‌ಲ್ಯಾಂಡಿನಲ್ಲಿ ವಾಸಿಸುತ್ತಿದ್ದ ಈತ ಭಾರತಕ್ಕೆ ತೆರಳಲೆಂದು ವಿಮಾನವೊಂದರಲ್ಲಿ ಟಿಕೆಟು ಕಾದಿರಿಸಿದ್ದ. ಆದರೆ ವಿಮಾನ ನಿಲ್ದಾಣ ತಲುಪಲು ವಿಳಂಬವಾಗಿದ್ದು ವಿಮಾನದ ಹಾರಾಟವನ್ನು ತಡೆಹಿಡಿಯುವ ಉದ್ದೇಶದಿಂದ ಆ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ. ತಕ್ಷಣ ಎಚ್ಚೆತ್ತ ಪೊಲೀಸರು ಇನ್ನೇನು ಟೇಕ್‌ಆಫ್ ಆಗಲಿದ್ದ ಆ ವಿಮಾನದ ಹಾರಾಟ ತಡೆಹಿಡಿದು ತಪಾಸಣೆ ಆರಂಭಿಸಿದರು. ಬಳಿಕ ಅದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿತು. ಆ ವೇಳೆ ಏದುಸಿರು ಬಿಡುತ್ತಾ ಓಡಿ ಬಂದ ಈ ವ್ಯಕ್ತಿಯ ವರ್ತನೆಯಿಂದ ಸಂಶಯಗೊಂಡು ವಿಚಾರಿಸಿದಾಗ ಆತ ಸತ್ಯ ಬಾಯಿ ಬಿಟ್ಟ. ಆತನನ್ನು ಬಂಧಿಸಿ ಶಿಕ್ಷೆ ವಿಧಿಸಲಾಗಿದೆ.
Next Story





